ಸಿಎಂ ಪರಿಹಾರ ನಿಧಿಗೆ ಅರ್ಜಿ: ಈ ದಾಖಲಾತಿಗಳು ಕಡ್ಡಾಯವಾಗಿರಲಿ…

ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುತ್ತಿದ್ದೀರಾ ? ಹಾಕಿದ್ದರೆ ಅರ್ಜಿಯನ್ನು ಸಮರ್ಪಕವಾಗಿ ಸಲ್ಲಿಸುವುದು ಅನಿವಾರ್ಯ. ಶಾಸಕ, ಸಚಿವರು, ಸಂಸದರು ಸಮರ್ಪಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುತ್ತಿಲ್ಲ. ಇದರಿಂದ ಶೀಘ್ರಗತಿಯಲ್ಲಿ ಕಡತ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಬಡವರು, ನಿರ್ಗತಿಕರು ಹಾಗೂ ನೊಂದ ಜನರಿಗೆ ಸಕಾಲದಲ್ಲಿ ಪರಿಹಾರ ನೀಡಲಾಗುತ್ತಿಲ್ಲ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಶಾಸಕ, ಸಚಿವರು ಮತ್ತು ಸಂಸದರಿಗೆ ಪತ್ರ ಬರೆದಿದ್ದಾರೆ.
ಇದರಿಂದ ಸಿಎಂ ಪರಿಹಾರ ನಿಧಿಯ ಉದ್ದೇಶ ಈಡೇರುತ್ತಿಲ್ಲ ಎಂದು ಸಿಎಂ, ಇನ್ನು ಮುಂದೆ ಕಡ್ಡಾಯವಾಗಿ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ವಿನಂತಿಸಿದ್ದಾರೆ.
ಸಿಎಂ ಪರಿಹಾರ ನಿಧಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಪಾಸ್ ಪೋರ್ಟ್ ಅಳತೆಯ ಅರ್ಜಿದಾರರ ಭಾವಚಿತ್ರ
ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ
ಅರ್ಜಿದಾರರ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವ ಆಧಾರ್ ಕಾರ್ಡ್
ಅರ್ಜಿದಾರರು ಚಿಕಿತ್ಸೆ ಪಡೆದಿದ್ದಲ್ಲಿ, ಆಸ್ಪತ್ರೆಯ ಸೀಲ್ ಮತ್ತು ಸೈನ್ ಇರುವ ಆಸ್ಪತ್ರೆಯ ಅಂತಿಮ ಬಿಲ್ಲು
ಅರ್ಜಿದಾರರು ಚಿಕಿತ್ಸೆ ಪಡೆಯಬೇಕಾದ್ದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿ
ಅರ್ಜಿದಾರರ ಬ್ಯಾಂಕ್ ಖಾತೆ ಪಾಸ್ ಬುಕ್ ನ ಜೆರಾಕ್ಸ್ ಪ್ರತಿ
ಅರ್ಜಿದಾರರು ಅಥವಾ ಅವರ ಕುಟುಂಬದವರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವಾಗ ಇದಿಷ್ಟು ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಪತ್ರದಲ್ಲಿ ಸಿಎಂ ಕೋರಿದ್ದಾರೆ.

