Latestಮನರಂಜನೆಸಿನಿಮಾ

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಡೆದು ಬಂದ ಹಾದಿ

ಬಿಟೌನ್ ನೈಟಿಂಗೇಲ್ ಎಂದೇ ಪ್ರಸಿದ್ದಿಯಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಅವರ ಹಾಡಿಗೆ ಅದೆಷ್ಟೋ ಮಂದಿ ಮರುಳಾಗದವರೇ ಇಲ್ಲ. ಅವರು ತಮ್ಮ ವೃತ್ತಿ ಜೀವನದಲ್ಲಿ ನಡೆದು ಬಂದ ಹಾದಿ ಇಲ್ಲಿದೆ. ಅವರು ಜೀವ ತುಂಬಿದ್ದು ಸುಮಾರು 25,000ಕ್ಕೂ ಅಧಿಕ ಹಾಡುಗಳಿವೆ. ದೇಶ ವಿದೇಶದ ಸುಮಾರು 36ಕ್ಕೂ ಅಧಿಕ ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಗಾಯನದ ಮೋಡಿ ಮಾಡಿದ್ದರು.ಇದೇ ಕಾರಣದಿಂದ ಅವರನ್ನು ಅಭಿಮಾನಿಗಳು ಬಾಲಿವುಡ್ ನೈಟಿಂಗೇಲ್, ಕ್ವೀನ್ ಆಫ್ ದಿ ಮೆಲೋಡಿ, ವಾಯ್ಸ್ ಆಫ್ ದಿ ನೇಷನ್, ‘ವಾಯ್ಸ್ ಆಫ್ ದಿ ಮಿಲೇನಿಯಮ್’ ಮೊದಲಾದ ವೈಶಿಷ್ಟ್ಯಪೂರ್ಣ ಬಿರುದುಗಳಿಂದ ಕರೆಯುತ್ತಿದ್ದರು. ಹಿಂದಿ ಹಾಗೂ ಮರಾಠಿ ಚಿತ್ರಗಳ ಗೀತೆಗಳಿಗೆ ಲತಾ ಮಂಗೇಶ್ಕರ್ ಹೆಚ್ಚಾಗಿ ಗಾಯನ, ಸಂಗೀತ ಸಂಯೋಜನೆ ಮಾಡಿದ್ದರು. ಸುಮಾರು ಸಾವಿರಕ್ಕೂ ಅಧಿಕ ಬಾಲಿವುಡ್ ಚಿತ್ರಗಳಲ್ಲಿ ಹಾಡಿದ ಕೀರ್ತಿ ಅವರಿಗೆ ಸಲ್ಲಿದೆ.

ಲತಾ ಮಂಗೇಶ್ಕರ್ ಜೀವನ: ಲತಾ ಮಂಗೇಶ್ಕರ್ ಜನಿಸಿದ್ದು 1929ರ ಸೆಪ್ಟೆಂಬರ್ 28ರಂದು. ಪಂಡಿತ್ ದೀನನಾಥ್ ಮಂಗೇಶ್ಕರ್ ಹಾಗೂ ಸೇವಂತಿ ಅವರ ಪುತ್ರಿಯಾಗಿ ಮಧ್ಯಪ್ರದೇಶದ ಇಂದೋರ್​ನಲ್ಲಿ ಜನಿಸಿದ ಲತಾ ಅವರ ಮೊದಲ ಹೆಸರು ಹೇಮಾ ಮಂಗೇಶ್ಕರ್. ಪಂಡಿತ್ ದೀನನಾಥ್ ಅವರು ಸಂಗೀತಗಾರ ಹಾಗೂ ನಾಟಕಕಾರರಾಗಿದ್ದರು. ಅವರ ಒಂದು ನಾಟಕ ಭಾವ್​ಬಂಧನ್​ ನ ಒಂದು ಪಾತ್ರ ಲತಿಕಾ. ಅದೇ ಹೆಸರನ್ನು ಹೇಮಾಗೂ ಇಡಲು ನಿರ್ಧರಿಸಿದ ಪೋಷಕರು ಲತಾ ಮಂಗೇಶ್ಕರ್ ಎಂದು ಹೆಸರನ್ನು ಮರುನಾಮಕರಣ ಮಾಡಿದರು. ಲತಾ ಅವರ ಪೂರ್ವಜರು ಗೋವಾ ಮೂಲದವರು. ಮೂಲಸ್ಥಳವಾದ ‘ಮಂಗೇಶಿ’ಯ ನೆನಪಿಗೆ ಲತಾ ತಂದೆ ದೀನನಾಥ್ ಅವರು ತಮ್ಮ ನಾಮಧೇಯದಲ್ಲಿ ಮಂಗೇಶ್ಕರ್ ಎಂದು ಸೇರಿಸಿಕೊಂಡಿದ್ದರು.

ಲತಾ ಮಂಗೇಶ್ಕರ್ ಜರ್ನಿ: ಲತಾ ಮಂಗೇಶ್ಕರ್ ಅವರ ಸಂಗೀತ ಶುರುವಾಗಿದ್ದು, ತುಂಬಾ ಸಣ್ಣ ವಯಸ್ಸಿನಲ್ಲೇ. ತಂದೆ ದೀನನಾಥ್ ಮಂಗೇಶ್ಕರ್ ಅವರೇ ಲತಾ ಅವರಿಗೆ ಗುರುವಾಗಿದ್ದರು. ಐದನೇ ವಯಸ್ಸಿಗೆ ಸಂಗೀತ ಪ್ರಧಾನ ನಾಟಕಗಳಲ್ಲಿ ಲತಾ ಬಣ್ಣ ಹಚ್ಚಲು ಆರಂಭಿಸಿದ್ದರು.
1942ರಲ್ಲಿ ತಮ್ಮ 13ನೇ ವಯಸ್ಸಿಗೆ ಲತಾ ಮಂಗೇಶ್ಕರ್ ಮರಾಠಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಗಾಯಕಿಯಾಗಿ ಎಂಟ್ರಿಕೊಟ್ಟಿದ್ದರು. 1943ರಲ್ಲಿ ಮರಾಠಿ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಹಿಂದಿ ಹಾಡಿಗೆ ಧ್ವನಿಯಾದರು. 1945ರಲ್ಲಿ ಮುಂಬೈಗೆ ತೆರಳಿದ ಲತಾ ಉಸ್ತಾದ್ ಅಮನ್ ಅಲಿ ಖಾನ್ ಅವರ ಗರಡಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆ ಆರಂಭಿಸಿದರು. ಜೊತೆಗೆ ಹಿಂದಿ ಚಿತ್ರಗಳಲ್ಲೂ ಹಾಡಲು ಶುರು ಮಾಡಿದರು. ಮಧುಬಾಲಾರಿಂದ ಇತ್ತೀಚಿನ ಪ್ರಿಯಾಂಕಾ ಚೋಪ್ರಾರ ಅವರ ಸಿನಿಮಾಗಳಲ್ಲೂ ಲತಾ ಮಂಗೇಶ್ಕರ್ ಹಾಡಿದ್ದಾರೆ. ತಮ್ಮ ಹಾಡುಗಳಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಲತಾ ಮಂಗೇಶ್ಕರ್ ಪಡೆದ ಪ್ರಶಸ್ತಿಗಳು: ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಲತಾ ಮಂಗೇಶ್ಕರ್ ಅವರಿಗೆ ಅನೇಕ ಪ್ರಶಸ್ತಿಗಳು ಸಿಕ್ಕಿದೆ. ರಾಯಲ್ ಆಲ್ಬರ್ಟ್ ಹಾಲ್​ನಲ್ಲಿ ಪ್ರದರ್ಶನ ನೀಡಿದ ಭಾರತದ ಮೊದಲ ಗಾಯಕಿ ಅವರಾಗಿದ್ದರು. ಲತಾ ಅವರಿಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಬೆಂಗಾಲ್ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು, ಎರಡು ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳು, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಲತಾ ಮಂಗೇಶ್ಕರ್ ಅವರಿಗೆ 1989 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2001 ರಲ್ಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಯಿತು. ಫ್ರಾನ್ಸ್ ಸರ್ಕಾರವು 2007 ರಲ್ಲಿ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಕೂಡ ನೀಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button