Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯರಾಮನಗರಶಿಕ್ಷಣಸುದ್ದಿ

ಅತಿಥಿ ಉಪನ್ಯಾಸಕರ ಕೆಲಸಕ್ಕೆ ಕತ್ತರಿ, ಕೂಡಲೇ ಬಿಕ್ಕಟ್ಟು ಬಗೆಹರಿಸಿ: ಸಿಎಂಗೆ ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಏಕಾಎಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಿಎಂ, ಜೆಡಿಎಸ್ ನೇತಾರ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಬಂದಿರುವ ವರದಿಯೊಂದನ್ನು ಪ್ರಸ್ತಾಪಿಸಿರುವ ಅವರು, ಇದು ಯಾವ ಸೀಮೆಯ ಆಡಳಿತ ಎಂದು ಹರಿಹಾಯ್ದಿದ್ದಾರೆ. ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಕೂಡಲೇ ಮಧ್ಯಪ್ರವೇಶಿಸಿ ಬಿಕ್ಕಟ್ಟು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.  

ಕುಮಾರಸ್ವಾಮಿ ಸರಣಿ ಟ್ವೀಟ್ ನ ಪೂರ್ಣಪಾಠ ಹೀಗಿದೆ.

9,881 ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತಾಗಿದೆ. ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಎಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ? ಎಂದು ಪ್ರಶ್ನಿಸಿದ್ದಾರೆ.

ಭಾರತವು ವಿಶ್ವಗುರು ಆಗಬೇಕು ಎನ್ನುತ್ತೀರಿ, ರಾಷ್ಟ್ರೀಯ ಶಿಕ್ಷಣದ ಮೂಲಕ ದೇಶವನ್ನು ಜ್ಞಾನಕಾಶಿ ಮಾಡುತ್ತೇವೆ ಎಂದು ಹೇಳುತ್ತೀರಿ, ಕರ್ನಾಟಕವು ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ. 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧನೆ ಮಾಡಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

ದೇಶ ಕಟ್ಟುವುದರಲ್ಲಿ ಶಿಕ್ಷಣವೇ ನಿರ್ಣಾಯಕ. ಆ ಶಿಕ್ಷಣ ವ್ಯವಸ್ಥೆಗೆ ಗುರುವೇ ನಾಯಕ. ಆದರೆ ಇಂದು ಕಲಿಸುವ ಗುರುವು ದಿಕ್ಕಿಲ್ಲದೆ ಬೀದಿಯಲ್ಲಿ ನಿಂತಿದ್ದಾನೆ. ಸರಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಸರಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕಿ, ವ್ಯವಸ್ಥಿತವಾಗಿ ಖಾಸಗಿ ವಲಯವನ್ನು ಬಲಪಡಿಸುವ, ಮಕ್ಕಳು-ಪೋಷಕರನ್ನು ಖಾಸಗಿಯವರ ಗುಲಾಮರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆಯಾ? ಎನ್ನುವ ಅನುಮಾನ ಬರುತ್ತಿದೆ.

ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ, ಹಿರಿತನ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಹಾಗಾದರೆ, ಇವೆರಡೂ ಅರ್ಹತೆಗಳು ಇಲ್ಲದಿದ್ದವರನ್ನು ಇಷ್ಟು ದಿನ ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಸಿಕೊಂಡಿದ್ದು ಯಾಕೆ? ಅದಕ್ಕೆ ಕಾನೂನಿನಲ್ಲಿ ಅವಕಾಶ ಇತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಆರೇ ತಿಂಗಳಲ್ಲಿ ಅಭಿವೃದ್ಧಿ ಹರಿಕಾರರಾಗುವುದು ಎಂದರೆ ಇದೇನಾ? ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದರೆ ನಿರುದ್ಯೋಗ ಸೃಷ್ಟಿಯಾ? ಸರಕಾರ ಇರುವುದು ಸಬೂಬು ಹೇಳುವುದಕ್ಕಲ್ಲ, ಕಾರಣ ಹೇಳಿ ಪಲಾಯನ ಮಾಡುವುದಕ್ಕಲ್ಲ. ನ್ಯಾಯ ಕೊಡುವ ಬಗ್ಗೆ ಕ್ರಮ ವಹಿಸಬೇಕು. ಕೂಡಲೇ ಸಿಎಂ ಬೊಮ್ಮಾಯಿ ಅವರು ಈ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button