ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣ ದಂಪತಿ ಪಿಕ್ನಿಕ್

ನಟ ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಮೈಸೂರಿನ ಶಕ್ತಿಧಾಮದ ಜವಬ್ದಾರಿಯನ್ನ ನಟ ಶಿವರಾಜ್ ಕುಮಾರ್ ದಂಪತಿಗಳು ವಹಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಆಗಾಗ ಶಿವಣ್ಣ ದಂಪತಿಗಳು ಮೈಸೂರಿಗೆ ಹೋಗಿ ಬರುತ್ತಿರುತ್ತಾರೆ. ನಿನ್ನೆ ತಾನೇ ಶಕ್ತಿಧಾಮದ ಮಕ್ಕಳನ್ನ ಪುನೀತ್ ಸಮಾಧಿ ಭೇಟಿಗೆ ಕರೆದುಕೊಂಡು ಬಂದಿದ್ದ ಶಿವಣ್ಣ ಇಂದು ಪಿಕ್ನಿಕ್ಗೆ ಕರೆದುಕೊಂಡು ಹೋಗಿದ್ದಾರೆ.
ಶಕ್ತಿಧಾಮದ ಮಕ್ಕಳನ್ನ ನಂದಿ ದೇವಾಲಯ ಹಾಗೂ ನಂದಿ ಬೆಟ್ಟಕ್ಕೆ ಶಿವಣ್ಣ ದಂಪತಿಗಳು ಕರೆದುಕೊಂಡು ಹೋಗಿದ್ದಾರೆ. ದೇವರ ದರ್ಶನದ ಬಳಿಕ ಶಿವಣ್ಣ ದಂಪತಿಗಳು ಮಕ್ಕಳಿಗೆ ಸಿಹಿ ತಿನ್ನಿಸಿದರು. ಬಳಿಕ ಪುನೀತ್ ರಾಜ್ಕುಮಾರ್ ಹಾಡು ಹಾಡುತ್ತಾ, ಸ್ಫೂರ್ತಿಧಾಯಕ ಘೋಷಣೆಗಳನ್ನ ಕೂಗುತ್ತಾ ಸಾಲಾಗಿ ಬೆಟ್ಟ ಏರಿದರು.
ಮಕ್ಕಳ ಜ್ಞಾನ ವೃದ್ಧಿಗಾಗಿ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಗಾಗಿ ಪ್ರವಾಸ ಕರೆತಂದಿದ್ದೇನೆ. ನಿನ್ನೆ ಬೆಂಗಳೂರಿಗೆ ಬಂದಿದ್ದರು. ಅಪ್ಪಾಜಿ, ಅಮ್ಮ, ಅಪ್ಪು ಅವರನ್ನು (ಸಮಾಧಿ) ನೋಡಿದರು. ನಂತರ ಮ್ಯೂಸಿಯಂ, ಪ್ಯಾಲೆಸ್ ನೋಡಿದರು. ಇಂದು ನಂದಿ ಬೆಟ್ಟಕೆ ಬಂದಿದ್ದಾರೆ. ಇಲ್ಲಿಂದ ಸಂಜೆ ಮನೆಗೆ ಬರುತ್ತಾರೆ. ಪ್ರವಾಸ ಮುಗಿಸಿ ನಾಳೆ ಎಲ್ಲರೂ ಮೈಸೂರಿಗೆ ಮರಳಲಿದ್ದಾರೆ ಎಂದು ಶಿವಣ್ಣ ಹೇಳಿದರು.
ನಮ್ಮ ತಂದೆ, ತಾಯಿ ಹಾಗೂ ಕೆಂಪಯ್ಯನವರು ಆರಂಭಿಸಿದ ಸಂಸ್ಥೆ ಶಕ್ತಿಧಾಮ. ಸಾಕಷ್ಟು ಟ್ರಸ್ಟಿಗಳು ಸೇರಿ ಆರಂಭ ಮಾಡಿದ ಸಂಸ್ಥೆ ಇದು. ಸಂಸ್ಥೆಯಲ್ಲಿ 150 ಮಂದಿ ಮಕ್ಕಳಿದ್ದು ಈ ವರ್ಷ 200 ಜನ ಮಕ್ಕಳು ಆಗಲಿದ್ದಾರೆ. ಅವರಿಗೆ ಊಟ, ವಸತಿ, ಶಾಲೆ ಎಲ್ಲಾ ಜವಬ್ದಾರಿ ನಮ್ಮದು. ಅಮ್ಮ ಅಗಲಿದ ಬಳಿಕ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮವನ್ನು ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಶೈಕ್ಷಣಿಕ ಪಾಠಗಳಷ್ಟೇ ಅಲ್ಲದೆ ಬೇರೆ ವಿಷಯಗಳ ಬಗ್ಗೆಯೂ ಆಸಕ್ತಿ ಬೆಳೆಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ ಎಂದು ಶಿವರಾಜ್ ಕುಮಾರ್ ಹೇಳಿದರು.



