ಫೆಬ್ರವರಿಯಾದ್ರೂ ಬಾರದ ಮಾವಿನ ತೆನೆ, ರೈತರಿಗೆ ಆತಂಕ

ರಾಮನಗರ: ನವೆಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ರಾಜ್ಯದಲ್ಲಿ ಹಣ್ಣುಗಳ ರಾಜ ಮಾವಿನ ಹಂಗಾಮು ಬಹುತೇಕ ಒಂದೂವರೆ, ಎರಡು ತಿಂಗಳು ವಿಳಂಬವಾಗಲಿದೆ.
ಸಾಮಾನ್ಯವಾಗಿ ರಾಜ್ಯದಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಮಾವಿನ ಕಾಯಿ ಕಟ್ಟುತ್ತದೆ. ಫೆಬ್ರವರಿ ಅಂತ್ಯ, ಮಾರ್ಚ್ ವೇಳೆ ಫಸಲು ಬೆಳೆಗಾರರ ಕೈ ಸೇರುತ್ತದೆ. ಆದರೆ ಈ ಬಾರಿ ಫೆಬ್ರವರಿ ಪ್ರಾರಂಭವಾಗುತ್ತಾ ಬಂದರೂ ಇನ್ನೂ ಕಾಯಿ ಕಟ್ಟಿಲ್ಲ. ಹೀಗಾಗಿ ಏಪ್ರಿಲ್-ಮೇ ತಿಂಗಳಿಗೆ ಫಸಲು ಕೈ ಸೇರುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಇದು ರಾಜ್ಯದ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಾದ ರಾಮನಗರ, ಧಾರವಾಡ, ಕೋಲಾರ, ಚಿಕ್ಕಾಬಳ್ಳಾಪುರದ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕೋವಿಡ್ ನಿಂದಾಗಿ ನಷ್ಟ ಮಾಡಿಕೊಂಡಿದ್ದ ರೈತರು ಈ ಬಾರಿ ಉತ್ತಮ ಮಾವಿನ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ನವೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವಿನ ಮರಗಳಲ್ಲಿ ಹೂವು, ಕಾಯಿ ವಿಳಂಬವಾಗಿದೆ. ಹೂ, ಕಾಯಿ ಕಟ್ಟದ ಮಾವಿನ ತೋಟಗಳಲ್ಲಿ ಮಾವಿನ ತೋಟಗಳನ್ನು ತೆಗೆದುಕೊಳ್ಳಲು ದಲ್ಲಾಳಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟದ ಭೀತಿ ಉಂಟಾಗಿದೆ.
ಅಕಾಲಿಕ ಮಳೆಯಿಂದಾಗಿ ಸಾಮಾನ್ಯವಾಗಿ ಜನವರಿ ಆರಂಭದಲ್ಲೇ ಫಸಲು ಬಿಡಬೇಕಿದ್ದ ಮಾವು ಇನ್ನೂ ಸರಿಯಾಗಿ ಕಾಯಿ ಕಟ್ಟಿಲ್ಲ ಎಂದು ಹಲವು ರೈತರು ಆತಂಕಗೊಂಡಿದ್ದಾರೆ.




