Vehicle Towing: ಹದಿನೈದು ದಿನ ಟೋಯಿಂಗ್ ತಾತ್ಕಾಲಿಕ ಸ್ಥಗಿತ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಸಂಬಂಧ ಇನ್ನು ಹದಿನೈದು ದಿನಗಳಲ್ಲಿ ಹೊಸ ಹಾಗೂ ಸರಳೀಕೃತ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಅಲ್ಲಿವರೆಗೂ ಸರ್ಕಾರ ಟೋಯಿಂಗ್ ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಟೋಯಿಂಗ್ ಹೊಸ ನೀತಿ ಪರಿಷ್ಕರಣೆ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮುಂದಿನ ಹದಿನೈದು ದಿನಗಳಲ್ಲಿ ಹೊಸ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರುವ ವಿಶ್ವಾಸವಿದೆ. ಹೊಸ ವ್ಯವಸ್ಥೆ ಘೋಷಣೆ ಮಾಡುವವರೆಗೆ ಟೋಯಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಆದರೆ ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ರೆ ಗುರುವಾರದಿಂದ ಸಂಚಾರ ಪೊಲೀಸರು ದಂಡ ವಿಧಿಸಲಿದ್ದಾರೆ ಎಂದರು.
ಇನ್ನು ಪೊಲೀಸರು ಬಾಡಿ ವೋರ್ನ್ ಕ್ಯಾಮೆರಾ ಧರಿಸುತ್ತಾರೆ. ನೋ ಪಾರ್ಕಿಂಗ್ ವಿಚಾರವಾಗಿ ಗಲಾಟೆಗಳು ಸಂಭವಿಸಿದರೆ ಎಲ್ಲಾ ವಿದ್ಯಮಾನಗಳು ಪೊಲೀಸರ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಆಗ ಯಾರೂ ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.
ಸಂಚಾರ ನಿಯಮ ಉಲ್ಲಂಘಿಸಿದ್ರೆ ವಿಧಿಸುವ ದಂಡ ಮೊತ್ತದ ಪರಿಷ್ಕರಣೆ ಸೇರಿದಂತೆ ಹಲವು ಸ್ಥರಗಳಲ್ಲಿ ಚರ್ಚೆ ನಡೆದಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆ ಸಹ ಪಡೆಯಲಾಗಿದ್ದು, ಕೆಲವೇ ದಿನಗಳಲ್ಲಿ ಟೋಯಿಂಗ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ಭರವಸೆ ನೀಡಿದರು.
