
ನವದೆಹಲಿ: ನಾಲ್ಕು ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ಸಂಚಾರಕ್ಕೆ ಬಿಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಕೋವಿಡ್ ಸಾಂಕ್ರಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ವನ್ ಕ್ಲಾಸ್ ವನ್ ಟಿವಿ ಆರಂಭಿಸಲಾಗುವುದು, ಇ-ವಿದ್ಯಾ ಯೋಜನೆಯಡಿ 200 ಚಾನಲ್ ಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಲೋಕಸಭೆಯಲ್ಲಿ ಕೇಂದ್ರದ ಬಜೆಟ್ ಮಂಡಿಸುತ್ತಿರುವ ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ. ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
ಶೇ.9.27ರಷ್ಟು ಭಾರತ ಬೆಳವಣಿಗೆಯ ಗುರಿ ಹೊಂದಲಾಗಿದೆ ಎಂದೂ ಅವರು ತಿಳಿಸಿದರು. ಪ್ರಧಾನ ಮಂತ್ರಿಗಳ ಗತಿಶಕ್ತಿ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಉತ್ಪಾದಕತೆಯ ವೃದ್ಧಿ, ಅವಕಾಶಗಳ ಹೆಚ್ಚಳ, ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಸುಧಾರಣೆ, ಪರಿಸರ ಸಂರಕ್ಷಣೆ, ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು ಇವು ಬಜೆಟ್ ಮೂಲಾಧಾರ ಎಂದು ಸಚಿವೆ ಸ್ಪಷ್ಟಪಡಿಸಿದರು.
