ಬಿಟೌನ್ನಲ್ಲಿ ಒಂದಾಗ್ತಾರಾ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ಪುಷ್ಪ ಸಿನಿಮಾದ ಬಳಿಕ ನಟಿ ರಶ್ಮಿಕಾ ಮಂದಣ್ಣ ಹೆಚ್ಚು ಹೆಚ್ಚು ಸುದ್ದಿಯಾಗ್ತಿದ್ದಾರೆ. ಇತ್ತೀಚೆಗೆ ಏರ್ ಪೋರ್ಟ್ನಲ್ಲಿ ತುಂಡುಡುಗೆಯಲ್ಲಿ ಕಾಣಿಸಿಕೊಂಡು ಟ್ರೋಲ್ ಆಗಿದ್ದ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಕಚೇರಿಗೆ ಹೋಗಿ ಸದ್ದು ಮಾಡ್ತಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಕರಣ್ ಜೋಹರ್ ಭೇಟಿಗೆ ಕಾರಣ ಏನು ಅನ್ನೋದು ಇಲ್ಲಿದೆ ನೋಡಿ.
ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ರಶ್ಮಿಕಾ ಮಂದಣ್ಣ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಪರಭಾಷೆಯಿಂದ ರಶ್ಮಿಕಾಗೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈಗಾಗ್ಲೆ ಸಿದ್ದಾರ್ಥ್ ಮೆಲ್ಹೋತ್ರಾ ನಟನೆಯ ಮಿಷನ್ ಮಜ್ನು ಹಾಗೂ ಅಮಿತಾಬ್ ಬಚ್ಚನ್ ಅಭಿನಯದ ಗುಡ್ ಬೈ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ನಟಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಕರಣ್ ಜೋಹರ್ ನಿರ್ಮಾಣ ಸಂಸ್ಥೆಯ ಮುಂದಿನ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗೋದು ಫಿಕ್ಸ್ ಅನ್ನೊ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ. ರಶ್ಮಿಕಾ ಹಾಗೂ ಕರಣ್ ಭೇಟಿಗೆ ಸೇತುವೆಯಾಗಿರೋದು ನಟ ವಿಜಯ್ ದೇವರಕೊಂಡ ಎನ್ನಲಾಗ್ತಿದೆ.
ಕರಣ್ ಜೋಹರ್ ಸಹ ನಿರ್ಮಾಣದ ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ. ಹೀಗಾಗಿ ಈ ಇಬ್ಬರ ನಡುವೆ ಉತ್ತಮ ಬಾಂದವ್ಯವಿದೆ. ಈ ಸಲುಗೆಯಿಂದ ರಶ್ಮಿಕಾಗೆ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಅವಕಾಶ ಕೊಡಿಸಲು ವಿಜಯ್ ದೇವರಕೊಂಡ ಮುಂದಾಗಿದ್ದು ಕರಣ್ ಜೋಹರ್ರನ್ನ ಭೇಟಿ ಮಾಡಿಸಿದ್ದಾರೆ ಎನ್ನಲಾಗ್ತಿದೆ.
ಈ ಹಿಂದೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಡಿಯರ್ ಕಾಮ್ರೇಡ್ ಚಿತ್ರವನ್ನ ಬಾಲಿವುಡ್ನಲ್ಲಿ ರಿಲೀಸ್ ಮಾಡಲು ಕರಣ್ ಜೋಹರ್ ಮುಂದಾಗಿದ್ದರು. ಆದ್ರೆ ಕೊನೆಯ ಘಳಿಗೆಯಲ್ಲಿ ಆ ಐಡಿಯಾವನ್ನ ಕೈ ಬಿಟ್ಟು ವಿಜಯ್ ದೇವರಕೊಂಡ ಜೊತೆ ಲೈಗರ್ ಸಿನಿಮಾ ಮಾಡಲು ಮುಂದಾದ್ರು. ಹೀಗಾಗಿ ಇದೇ ಜೋಡಿಯನ್ನ ಬಾಲಿವುಡ್ನಲ್ಲಿ ಒಂದು ಮಾಡಲು ಕರಣ್ ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಈಗಾಗ್ಲೆ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಟನೆಯನ್ನ ಕೊಂಡಾಡಿರೋ ಕರಣ್ ಜೋಹರ್ ತಮ್ಮ ಮುಂದಿನ ಸಿನಿಮಾದಲ್ಲಿ ರಶ್ಮಿಕಾಗೆ ಆಫರ್ ನೀಡಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.




