ಪೊಲೀಸ್ ಸಿಬ್ಬಂದಿಗೆ ಗೃಹ ಸಚಿವ ಜ್ಞಾನೇಂದ್ರ ಖಡಕ್ ವಾರ್ನಿಂಗ್!

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಭಾಗಿಯಾಗುವ ಯಾವುದೇ ಪೊಲೀಸ್ ಸಿಬ್ಬಂದಿಗಳ ವಿರುದ್ಧ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್.ಟಿ.ನಗರದ ಮನೆಗೆ ಭದ್ರತಾ ಸಿಬ್ಬಂಧಿಗೆಯಾಗಿ ನಿಯೋಜಿಸಿದ್ದ ಇಬ್ಬರೂ ಪೊಲೀಸರು ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸಚಿವರಿಂದ ಈ ಖಡಕ್ ವಾರ್ನಿಂಗ್ ಹೊರಬಿದ್ದಿದೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಸಚಿವರು, ” ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸಬೇಕಾದ, ಹೊಣೆಗಾರಿಕೆ ಹೊಂದಿರುವ, ಪೊಲೀಸ್ ಸಿಬ್ಬಂದಿಗಳೇ ಅಪರಾಧ ಎಸಗುವುದನ್ನು, ಸಹಿಸಲಾಗುವುದಿಲ್ಲ ಎಂದರು.
ರಾಜ್ಯದಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿದ್ದು ಕೇವಲ ಬೆರೆಣಿಕೆಯಷ್ಟು ಸಿಬ್ಬಂದಿಗಳು ಮಾಡುವ ಕೆಟ್ಟ ಕೆಲಸದಿಂದ, ಇಡೀ ಇಲಾಖೆಯ ಬಗ್ಗೆ, ಸಾರ್ವಜನಿಕರಲ್ಲಿ, ಋಣಾತ್ಮಕ ಭಾವನೆ ಬೆಳೆಯಲು ಕಾರಣವಾಗುತ್ತದೆ, “ಅಂಥಹ ಸಿಬ್ಬಂದಿ ಗಳನ್ನು ಕೇವಲ ಅಮಾನತ್ತು ಮಾತ್ರ ಅಲ್ಲ, ಸೇವೆಯಿಂದ ವಜಾ ಮಾಡುವ ಕಠಿಣ ಕ್ರಮ ಜರುಗಿಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಗಳ ನಿವಾಸದ ಸಮೀಪ, ಭದ್ರತೆಗೆಂದು ನಿಯೋಜಿಸಲಾದ ಇಬ್ಬರು ಪೊಲೀಸರು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಕೊಡಿರುವುದು ಬೆಳಕಿಗೆ ಬಂದಿದೆ. ” ಇಂಥಹ ಕೃತ್ಯವನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಂಡ ಅಧಿಕಾರಿಗಳನ್ನು ಅಭಿನಂದಿಸುವೆ ಹಾಗೂ ಸೂಕ್ತ ಬಹುಮಾನ ಘೋಷಿಸಲು ನಿರ್ದೇಶನ ನೀಡಿದ್ದೇನೆ” ಎಂದು ಸಚಿವರು ತಿಳಿಸಿದರು.
