ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲತಾ ಮಂಗೇಶ್ಕರ್ ಕುರಿತು ಕೆಲವೊಂದು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ಇದು ಅಭಿಮಾನಿಗಳನ್ನ ತೀವ್ರ ಆತಂಕ ಪಡುವಂತೆ ಮಾಡಿದೆ.
ಕಳೆದ ಒಂದು ವಾರದ ಹಿಂದೆ ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲತಾ ಮಂಗೇಶ್ಕರ್ ಅವರಿಗೆ 92 ವರ್ಷ ವಯಸ್ಸಾಗಿದ್ದು ಸಹಜವಾಗಿಯೇ ಅವ್ರ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಲತಾ ಮಂಗೇಶ್ಕರ್ ಆರೋಗ್ಯದ ಕುರಿತಾಗಿ ಅವರ ಮನೆಯವರು ಹಾಗೂ ಆಸ್ಪತ್ರೆಯ ವೈದ್ಯರು ಅಪ್ಡೇಟ್ ಮಾಡುತ್ತಲೇ ಇದ್ದಾರೆ. ಇದರ ಕುರಿತಾಗಿಯೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿ ಹಬ್ಬಿಸುತ್ತಿದ್ದು ಅವ್ರ ಕುಟುಂಬದವರಿಗೆ ಚಿಂತೆಗೀಡು ಮಾಡುವಂತೆ ಮಾಡಿದೆ. ಈ ಬಗ್ಗೆ ಲತಾ ಮಂಗೇಶ್ಕರ್ ಆಪ್ತ ವರ್ಕಾರರು ಮಾತನಾಡಿದ್ದು ದಯವಿಟ್ಟು ಯಾರೂ ಕೂಡ ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಲತಾ ಮಂಗೇಶ್ಕರ್ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಸುದ್ದಿ ನಿಜಕ್ಕೂ ಬೇಸರ ತರಿಸುವಂಥದ್ದು. ಯಾಕೆಂದರೆ ಇದು ನಿಜವಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಿ ಮನೆಗೆ ಮರಳುವಂತೆ ಎಲ್ಲರೂ ಪ್ರಾರ್ಥಿಸಿ ಎಂದು ವಕ್ತಾರರು ಕೇಳಿಕೊಂಡಿದ್ದಾರೆ.
ಲತಾ ಆರೋಗ್ಯದ ಕುರಿತು ಮಹಾರಾಷ್ಟ್ರ ಆರೋಗ್ಯ ಸಚಿವರ ರಾಜೇಶ್ ಟೋಪೆ ಹೇಳಿಕೆ ನೀಡಿದ್ದು, ಲತಾ ಅವರ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಯ ಆಡಳಿತ ವರ್ಗದವರ ಜೊತೆ ನಾನು ಮಾತನಾಡಿದ್ದೇನೆ. ಜನರು ಹೆಲ್ತ್ ಅಪ್ಡೇಟ್ ತಿಳಿಯಲು ಕಾಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯ ವಕ್ತಾರರು ಹೆಲ್ತ್ ಅಪ್ಡೇಟ್ ನೀಡುತ್ತಿರಬೇಕು ಎಂದು ಸೂಚಿಸಿದ್ದೇನೆ ಎಂದಿದ್ದಾರೆ.



