ರಾಜಕೀಯಕ್ಕೆ ಸೋನು ಸೂದ್ ತಂಗಿ ಎಂಟ್ರಿ: ಪ್ರಚಾರ ಮಾಡಲ್ಲ ಎಂದ ನಟ

Sonu Sood: ನಟ ಸೋನು ಸೂದ್ ಕೇವಲ ರೀಲ್ನಲ್ಲಿ ಮಾತ್ರವಲ್ಲ ರಿಯಲ್ನಲ್ಲೂ ಹಿರೋ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನ ಮಾಡಿ ಮೆಚ್ಚುಗೆ ಘಳಿಸಿದ್ದರು. ಸೋನ್ ಸೂದ್ ಸಹಾಯ ನೋಡಿದ ಸಾಕಷ್ಟು ಮಂದಿ ಇದು ರಾಜಕೀಯಕ್ಕೆ ಸೇರುವ ಉದ್ದೇಶ ಎಂದು ಟೀಕಿಸಿದ್ದರು. ಆದ್ರೆ ಇದೀಗ ಸೋನು ಹೇಳಿಕೆ ಕೇಳಿ ಪ್ರತಿಯೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಟ ಸೋನು ಸೂದ್ಗೆ ರಾಜಕೀಯದಿಂದ ಸಾಕಷ್ಟು ಆಫರ್ ಬಂದಿತ್ತು. ಆದ್ರೆ ತನಗೆ ರಾಜಕೀಯ ಸೇರುವ ಯಾವುದೇ ಉದ್ದೇಶ ಇಲ್ಲ ಎಂದು ಸೋನು ಪದೇ ಪದೇ ಹೇಳುತ್ತಿದ್ದರು. ಆದ್ರೂ ಯಾರು ಕೂಡ ಸೋನು ಸೂದ್ ಮಾತನ್ನ ನಂಬಿರಲಿಲ್ಲ. ಆದ್ರೆ ಇದೀಗ ಸೋನು ಸೂದ್ ಸಹೋದರಿ ಕಾಂಗ್ರೆಸ್ ಪಕ್ಷ ಸೇರಿದ್ದು ಯಾವುದೇ ಕಾರಣಕ್ಕೂ ತಂಗಿಯ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ನಟ ಸೋನು ಸೂದ್ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಪಂಜಾಬ್ನಲ್ಲಿ ನೆಲೆಸಿರುವ ಮಾಳವಿಕಾ ಸೂದ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಳವಿಕಾ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೋನು ಸೂದ್ ನನ್ನ ಕಡೆಯಿಂದ ಯಾವುದೇ ಸಹಾಯ ಸಿಗುವುದಿಲ್ಲ ಎಂದಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ನನ್ನ ತಂಗಿ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಕೆಲವು ವರ್ಷಗಳಿಂದ ಆಕೆ ಪಂಜಾಬ್ನಲ್ಲಿ ವಾಸಿಸುತ್ತಿದ್ದು ಜನರ ಸಮಸ್ಯೆಗಳೇನು ಎಂಬುದು ತಿಳಿದಿದೆ. ಜನರ ಜೊತೆ ಸಂಪರ್ಕದಲ್ಲಿ ಇದ್ದುಕೊಂಡು ನೇರವಾಗಿ ಆಕೆ ಸಹಾಯ ಮಾಡುತ್ತಾಳೆ ಎಂದರೆ ಅದು ಖುಷಿಯ ವಿಚಾರ ಎಂದು ಸೋನು ಸೂದ್ ಹೇಳಿದ್ದಾರೆ.
ರಾಜಕೀಯದಲ್ಲಿ ಮುಂದುವರಿಯಬೇಕು ಎಂಬುದು ನನ್ನ ತಂಗಿಯ ನಿರ್ಧಾರ. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಮಾಡುತ್ತಿರುವ ಕೆಲಸವನ್ನು ಮುಂದುವರೆಸುತ್ತೇನೆ. ಚುನಾವಣೆಯಲ್ಲಿ ತಂಗಿಯ ಪರವಾಗಿ ಪ್ರಚಾರ ಮಾಡುವುದಿಲ್ಲ. ಯಾಕಂದರೆ ಆಕೆಯೇ ಪರಿಶ್ರಮ ಪಡಬೇಕು. ನಾನು ಮಾತ್ರ ಎಲ್ಲ ರಾಜಕೀಯ ಪಕ್ಷಗಳಿಂದ ದೂರ ಉಳಿದುಕೊಳ್ಳುತ್ತೇನೆ ಎಂದಿದ್ದಾರೆ.




