ಪಾದಯಾತ್ರೆ: ಸರ್ಕಾರ ಮತ್ತು ಕಾಂಗ್ರೆಸ್ಗೆ ಡೆಡ್ಲೈನ್ ನೀಡಿದ ಹೈಕೋರ್ಟ್

ಬೆಂಗಳೂರು: ಕೋವಿಡ್ ಆತಂಕದ ನಡುವೆ ನಡೆದಿರುವ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಉತ್ತರಿಸುವಂತೆ ರಾಜ್ಯ ಸರ್ಕಾರ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಗೆ ಹೈಕೋರ್ಟ್ ಒಂದು ದಿನದ ಗಡುವು ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನುಯ ಜ.14ಕ್ಕೆ ಮುಂದೂಡಿದೆ. ಮೇಕೆದಾಟು ಪಾದಯಾತ್ರೆಯ ಬಗ್ಗೆ ವಕೀಲ ಶ್ರೀಧರ್ ಪ್ರಭು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿರುವ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದರೂ ರಾಜ್ಯ ಸರ್ಕಾರ ಪಾದಯಾತ್ರೆಗೆ ಅವಕಾಶ ನೀಡಿದ್ದು ಏಕೆ ಎಂದು ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿತು. ಪಾದಯಾತ್ರೆ ತಡೆಯಲು ಸರ್ಕಾರಕ್ಕೆ ಅಸಮರ್ಥವೇ ? ಸರ್ಕಾರದ ಅಸಹಾಯಕತೆ ಏನು ಎಂದೂ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದಕ್ಕೆ ಉತ್ತರಿಸಿದ ಹೆಚ್ಚುವರಿ ಅಡ್ವೇಕೇಟ್ ಜನರಲ್ (ಎಎಜಿ) ಪಾದಯಾತ್ರೆ ನಡೆಸುವವರ ಮೇಲೆ ಸರ್ಕಾರ ಈಗಾಗಲೇ ಮೂರು ಎಫ್ ಐ ಆರ್ ದಾಖಲಿಸಿದೆ ಎಂದರು.
ಇದೇ ವೇಳೆ ಪಾದಯಾತ್ರೆ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆ ಸಂಬಂಧ ಕೈಗೊಂಡಿರುವ ಕ್ರಮಗಳೇನು ಎಂದು ನ್ಯಾಯಾಲಯ ಕೆಪಿಸಿಸಿಯನ್ನೂ ಪ್ರಶ್ನಿಸಿದೆ.
ಕೋರ್ಟ್ ಆದೇಶ ಪರಿಶೀಲಿಸುತ್ತೇವೆ: ಸಿದ್ದರಾಮಯ್ಯ
ಹೈಕೋರ್ಟ್ ಏನು ಆದೇಶ ನೀಡಿದೆ ಎಂಬುದನ್ನು ಪರಿಶೀಲಿಸಿ ಅದನ್ನು ಪಾಲಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಉದಾಸೀನತೆಯಿಂದ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆಯೇ ಹೊರತು ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೂರ್ವನಿಗದಿಯಂತೆ ಜ.19ವರೆಗೂ ಪಾದಯಾತ್ರೆ ಮಾಡಬೇಕು ಎಂಬುದೇ ತಮ್ಮಿಚ್ಚೆ ಎಂದರು.
