ಬೆಣ್ಣೆನಗರಿಯಲ್ಲಿ ಹೊಸ ವರ್ಷಾಚರಣೆಗೆ ಮಂಕು

ದಾವಣಗೆರೆ: ಕೊರೊನಾ ಹಾಗೂ ಒಮಿಕ್ರಾನ್ ಆತಂಕದಿಂದ ರಾಜ್ಯ ಸರ್ಕಾರ ಕಠಿಣ ರೂಲ್ಸ್ ಜಾರಿ ಮಾಡಿದ್ದು ಹೊಸ ವರ್ಷಾಚರಣೆ ಮೇಲೆ ಮಂಕು ಕವಿಯುವಂತೆ ಮಾಡಿದೆ. ರಾಜ್ಯ ಸರ್ಕಾರವು ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿದೆ. ಈ ಕಾರಣದಿಂದಾಗಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಹೊಸ ವರ್ಷದ ಆಚರಣೆಗೆ ಜನರು ಅಷ್ಟೇನೂ ಉತ್ಸಾಹ ತೋರುತ್ತಿಲ್ಲ.
ಒಮಿಕ್ರಾನ್ ಭೀತಿಯಿಂದ ಹೊಸ ವರ್ಷ ಆಚರಣೆ ಗೆ ದೂರ ಉಳಿದ ಬೆಣ್ಣೆ ನಗರಿ ಜನರು ಕೇಕ್ ಖರೀದಿಗೆ ಮುಂದಾಗುತ್ತಿಲ್ಲ. ಪ್ರತಿ ವರ್ಷ ಆಹಾರ್ 2000 ಹೊಟೇಲ್ ನಲ್ಲಿ ಕೇಕ್ ಖರೀದಿಗೆ ಜನರು ಮುಗಿಬೀಳುತ್ತಿದ್ದರು. ಆದ್ರೆ, ಕಳೆದ ಎರಡು ವರ್ಷಗಳಿಂದ ಜನರು ಹೆಚ್ಚಾಗಿ ಬರುತ್ತಿಲ್ಲ. ಹೊಟೇಲ್ ಮಾಲೀಕರು ಪ್ರತಿ ಹೊಸ ವರ್ಷ ವಿನೂತನ ರೀತಿ ಕೇಕ್ ಮಾಡಿ ಪ್ರದರ್ಶನಕ್ಕೆ ಇಡುತಿದ್ದರು. ವಿಧಾನಸೌಧ, ತಾಜ್ ಮಹಲ್, ಲಂಡನ್ ಬ್ರೀಡ್ಜ್, ಸಿರಿಗೆರೆ ಮಠ ಹೀಗೆ ಹತ್ತು ಹಲವು ರೀತಿಯಲ್ಲಿ ವಿನೂತನ ರೀತಿಯ ಕೇಕ್ ರೆಡಿ ಮಾಡಿ ಪ್ರದರ್ಶನಕ್ಕೆ ಇಡುತ್ತಿದ್ದರು. ಆದ್ರೆ, ಈ ಬಾರಿ ಆ ರೀತಿಯಲ್ಲಿ ಇಲ್ಲ.
ಕೇಕ್ ಮೇಳದ ಮೂಲಕ ಕೇಕ್ ಮಾರಾಟ ಮಾಡುತ್ತಿದ್ದ ಮಾಲೀಕರು, ಕೊರೊನಾ ಹಾಗೂ ಒಮಿಕ್ರಾನ್ ಭೀತಿ ಕಾರಣದಿಂದ ಜನರು ಬರುತ್ತಿಲ್ಲ. ತಯಾರಿಸಿ ಇಟ್ಟರೂ ಮಾರಾಟ ಆಗುವುದಿಲ್ಲ. ಈ ಕಾರಣದಿಂದಾಗಿ ಈ ಬಾರಿ ಕ್ರಿಕೆಟ್ ಪ್ಲೆ ಗ್ರೌಂಡ್, ಗಿಟಾರ್, ಛೋಟಾ ಭೀಮ್ ನಂತಹ ಕೇಕ್ ತಯಾರಿಸಿದ್ದಾರೆ.
ಎರಡು ವರ್ಷದಿಂದ ಕೊರೋನಾದಿಂದ ಹೊಸ ವರ್ಷಾಚರಣೆ ಜೋರಾಗಿ ನಡೆಯುತ್ತಿಲ್ಲ. ದಾವಣಗೆರೆಯ ಗಾಂಧಿ ವೃತ್ತದಲ್ಲಿರೋ ಹೋಟೆಲ್ ನಲ್ಲಿ ಡಿಸೆಂಬರ್ 31 ಬಂತೆಂದರೆ ಜನವೋ ಜನರು ಇರುತ್ತಿದ್ದರು. ಆದ್ರೆ, ಹೆಚ್ಚಾಗಿ ಗ್ರಾಹಕರು ಬಾರದಿರುವುದು ಹೊಟೇಲ್ ಮಾಲೀಕರ ಚಿಂತೆಗೀಡು ಮಾಡಿದೆ. 2022 ಬರಮಾಡಿಕೊಳ್ಳಲು ಬೆಣ್ಣೆ ನಗರಿ ಜನತೆಯ ನಿರುತ್ಸಾಹ ತೋರಿದ್ದು, ಪ್ರತಿ ವರ್ಷ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹೊಸ ವರ್ಷ ಆಚರಿಸುತಿದ್ದರು.
ಈ ಬಾರಿ ಈ ಉತ್ಸಾಹ ಕಾಣುತ್ತಲೇ ಇಲ್ಲ.




