ಕರ್ನಾಟಕ ಬಂದ್ ಗೆ ವ್ಯಾಪಕ ವಿರೋಧ, ಬಂದ್ ನಿರ್ಧಾರ ಅಚಲ: ವಾಟಾಳ್ ನಾಗರಾಜ್
ಬೆಂಗಳೂರು : ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಹೊಸ ವರ್ಷದ ಮುನ್ನ ದಿನವಾದ ಡಿ.31ರಂದು ಕರೆ ನೀಡಿರುವ ಕರ್ನಾಟಕ ಬಂದ್ ಪರ-ವಿರೋಧಕ್ಕೆ ಕಾರಣವಾಗಿದೆ. ಬಿಜೆಪಿ, ಜೆಡಿಎಸ್ ಬಂದ್ ಗೆ ವಿರೋಧ ವ್ಯಕ್ತಪಡಿಸಿದ್ದರೆ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಇದಕ್ಕೆ ಮತ್ತಿತರ ಕನ್ನಡಪರ ಸಂಘಟನೆಗಳು ದನಿಗೂಡಿಸಿದೆ. ಇನ್ನು ಶತಾಯ ಗತಾಯ ಬಂದ್ ಮಾಡಲೇ ಬೇಕು ಎಂದು ವಾಟಾಳ್ ನಾಗರಾಜ್ ಬೆಳಗಾವಿ ರಾನಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಬಂದ್ ಬೆಂಬಲಯಾಚಿಸಿದರು.
ಬಂದ್ ಎಲ್ಲದಕ್ಕೂ ಉತ್ತರವಲ್ಲ
ಬಂದ್ ಎಲ್ಲದಕ್ಕೂ ಉತ್ತರವಲ್ಲ ಮತ್ತು ಪರಿಹಾರ ಕೂಡ ಅಲ್ಲ ಎಂದು ಹುಬ್ಭಳ್ಳಿಯಲ್ಲಿ ಹೇಳಿಕೆ ನೀಡುವ ಮೂಲಕ ಕರ್ನಾಟಕ ಬಂದ್ ಗೆ ಸರ್ಕಾರದ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಬೆಂಬಲ ವಾಪಸ್ ಪಡೆದ ಕರವೇ
ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯನ್ನು ನಿಷೇಧಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಮೊದ ಮೊದಲು ಪೂರ್ಣ ಬೆಂಬಲ ಸೂಚಿಸಿತ್ತು ಮಹತ್ವದ ಬೆಳವಣಿಗೆಯಲ್ಲಿ ಈಗ ಅದು ತನ್ನ ನಿರ್ಧಾರದಿಂದ ಅದು ಹಿಂದೆ ಸರಿದಿದೆ.
ಬಂದ್ ನಿರ್ಧಾರ ಅಚಲ-ವಾಟಾಳ್
ಈ ನಡುವೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಅವರನ್ನು ಪೊಲಿಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್, 10 ದಿನಗಳ ಹಿಂದೆಯೇ ನಾವು ಬಂದ್‌ಗೆ ಕರೆ ಕೊಟ್ಟಿದ್ದೇವೆ. ನಮ್ಮ ಹೋರಾಟ ಎಂಇಎಸ್ ಬ್ಯಾನ್ ಮಾಡಲು, ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದವರ ವಿರುದ್ಧ. ಡಿ. 31 ರಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಶತಸಿದ್ದ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
