
ಬೆಳಗಾವಿ, ಡಿ.24- ಆಕ್ಷೇಪಾರ್ಹ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ನಿರ್ಗಮಿತ ಸದಸ್ಯ ರಘು ಆಚಾರ್ ಸದನದ ಕ್ಷಮೆಯಾಚಿಸಿದ ಪ್ರಸಂಗ ವಿಧಾನಪರಿಷತ್ ನಲ್ಲಿ ಶುಕ್ರವಾರ ನಡೆಯಿತು. ಮೇಲ್ಮನೆಯ ಘನತೆ ಮತ್ತು ಪರಂಪರೆಗೆ ಕುಂದು ಬರುವಂತೆ ಮಾತನಾಡಿದ್ದಾರೆ ಎಂದು ಹಿರಿಯ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮುನ್ನ ಧನವಿದೇಯಕದ ಮೇಲಿನ ಚರ್ಚೆ ಆರಂಭಿಸಿ ಮಾತನಾಡಿದ ರಘುಆಚಾರ್,ತಾನು ತಾವು ಎರಡು ಬಾರಿ ಈ ಸದನದ ಸದಸ್ಯನಾಗಿದ್ದೇನೆ. ನಾನು ಬಂದಾಗ ವಿಮಲಾಗೌಡ, ಡಿ.ಹೆಚ್.ಶಂಕರಮೂರ್ತಿ ಮತ್ತಿತರರಿದ್ದರು. ಚಿಂತಕರ ಚಾವಡಿ ಗುಣಮಟ್ಟ, ಘನತೆ ಉತ್ತಮವಾಗಿತ್ತು ಎಂದರು.
ಮಾತು ಮುಂದುವರಿಸಿ ರೋಲೆಕ್ಸ್ ಹಗರಣದಲ್ಲಿ ಸಿ.ಎಂ.ಇಬ್ರಾಹಿಂ ರಾಜೀನಾಮೆ ಕೊಡಿಸಿದ ಸ್ಮರಣೆ ಈ ಮನೆಗಿದೆ ಎಂದಾಗ, ಮಧ್ಯ ಪ್ರವೇಶಿಸಿದ ಸಿ.ಎಂ.ಇಬ್ರಾಹಿಂ ಅವರು ನಾನು ರಾಜೀನಾಮೆ ನೀಡಿದ್ದು ಹಗರಣಕ್ಕಾಗಿ ಅಲ್ಲ. ಆರೋಪ ಕುರಿತು ಸಿಬಿಐ ತನಿಖೆಗೆ ಆದೇಶವಾಯಿತು. ತನಿಖೆ ನಿಸ್ಪಕ್ಷಪಾತವಾಗಿ ನಡೆಯಲಿ ಎಂಬ ಕಾರಣಕ್ಕೆ ಸಚಿವನಾಗಿದ್ದ ನಾನು ರಾಜೀನಾಮೆ ನೀಡಿದ್ದೇನೆ. ತನಿಖೆ ನಡೆದು ನನ್ನನ್ನು ನಿರ್ದೋಷಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ಸ್ಪಷ್ಟಪಡಿಸಿದರು.
ಮುಂದುವರಿದು ಈ ಸದನದಲ್ಲಿ ಆ ಕಡೆಯೂ ಕಿರುಚುತ್ತಾರೆ. ಈ ಕಡೆಯು ಕಿರುಚುತ್ತಾರೆ. ಯಾಕೆ ಕಿರುಚುತ್ತಾರೆ ಎಂದು ಗೊತ್ತಿಲ್ಲ. ಬಹಳ ಭರವಸೆಗಳ ಮೇಲೆ ಇಲ್ಲಿಗೆ ಬಂದಿದ್ದೆ. ಆದರೆ ನನಗೆ ನಿರಾಶೆಯಾಯಿತು. ಅದಕ್ಕಾಗಿ ಕಲಾಪಕ್ಕೆ ಬರುವುದನ್ನೇ ನಿಲ್ಲಿಸಿದ್ದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ
ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತವರು ಮೊದಲು ಹುಚ್ಚರಾಗುತ್ತಾರೆ. ಗೆದ್ದವರು ಆರು ತಿಂಗಳ ಮೇಲೆ ಹುಚ್ಚರಾಗುತ್ತಾರೆ ಎಂದು ಪ್ರದೀಪ್ ಶೆಟ್ಟರ್ ಅವರಿಗೆ ಹೇಳಿದ್ದಾಗಿ ತಿಳಿಸಿದ ರಘು ಆಚಾರ್, ಚಿಂತರ ಚಾವಡಿ ತನ್ನ ಘನತೆ ಕಳೆದುಕೊಳ್ಳಬಾರದು. ವಿಧಾನ ಸಭೆಯಲ್ಲಿ ಸೋತವರಿಗೆ ಇಲ್ಲಿಗೆ ಅವಕಾಶ ನೀಡುವಂತಾಗಬಾರದು. ನಾನು ಕೂಡು ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ನನ್ನ ಮೊದಲನೇ ಅವಧಿಯಲ್ಲಿ ಉಗ್ರಪ್ಪ ಇಲ್ಲಿ ಸದಸ್ಯರಾಗಿದ್ದರು, ದೊಡ್ಡ ಗಾತ್ರದ ಪುಸ್ತಕಗಳನ್ನು ತರುತ್ತಿದ್ದರು, ಕ್ರಿಯಾಲೋಪ ಎತ್ತುತ್ತಿದ್ದರು. ಈಗ ಅದು ನಿಂತು ಹೋಗಿದೆ. ಭಾಷಣವೂ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಹಿಂದಿನ ಹಲವು ಮಂದಿ ಹೃದಯದಿಂದ ರಾಜಕಾರಣ ಮಾಡುತ್ತಿದ್ದರು. ಈಗ ಬಾಯಿಯಿಂದ ರಾಜಕಾರಣ ಮಾಡುತ್ತಿದ್ದೇವೆ. ವಿಧೇಯಕವನ್ನು ಪಾಸು ಮಾಡಿಕೊಳ್ಳುವುದು ಖಚಿತವಾಗಿದ್ದರೆ ಚರ್ಚೆ ಮಾಡುವುದು ಯಾವ ಪುರುಷಾರ್ಥಕ್ಕೆ. ಯಾವುದಾದರೂ ಒಬ್ಬ ಸಚಿವ ಲೋಪ ಇರುವ ಕಾನೂನುಗಳನ್ನು ಹಿಂಪಡೆದ ಉದಾಹರಣೆ ನಾನು ನೋಡಿಲ್ಲ ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸದಸ್ಯರು ಚೆನ್ನಾಗಿ ಮಾತನಾಡುತ್ತಿದ್ದಾರೆ. ಆದರೆ ಕೊನೆ ದಿನ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಅನುಭವಿಸಿ ಈಗ ಮಾತನಾಡಿದರೆ ಹೇಗೆ ? ಎಂದು ಆಕ್ಷೇಪಿಸಿದರು.
ಎಸ್.ವಿ.ಸಂಕನೂರು, ವೈ.ಎ.ನಾರಾಯಣಸ್ವಾಮಿ, ರಘು ಆಚಾರ್ ಅವರ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸಿದರು. ಇಲ್ಲಿಂದ ನಿರ್ಗಮಿಸುವ ಸದಸ್ಯರು ಮೇಲ್ಮನೆಯ ಹಿರಿಮೆಗೆ ಧಕ್ಕೆಯಾಗುವಂತೆ ಮಾತನಾಡಬಾರದು ಎಂದು ತಿಳಿ ಹೇಳಿದರು.
ಸದಸ್ಯ ಪುಟ್ಟಣ್ಣ ವ್ಯವಸ್ಥೆ ಹಾಳಾಗಿದೆ ಎಂದು ಹೇಳುವ ರಘು ಆಚಾರ್ ಕೂಡ ಹಣ ಖರ್ಚು ಮಾಡಿಯೇ ಗೆದ್ದಿದ್ದಾರೆ. ಕೋಟಾಶ್ರೀನಿವಾಸ ಪೂಜಾರಿ ಅವರಂತೆ ಪ್ರಾಮಾಣಿಕವಾಗಿ ಗೆದ್ದಿದ್ದರೆ ಒಪ್ಪಿಕೊಳ್ಳಬಹುದಿತ್ತು ಎಂದರು.
ಆಯನೂರು ಮಂಜುನಾಥ್ ಅವರು, ಸಭೆಯ ಸಭ್ಯತೆ ಮೀರಿ ಅವಮಾನ ಮಾಡುವಂತೆ ರಘುಆಚಾರ್ ಮಾತನಾಡಿದ್ದಾರೆ. ಇಲ್ಲಿ ಇರುವವರು ಬಹಳಷ್ಟು ಮಂದಿ ಹೋರಾಟದ ಹಿನ್ನೆಲೆಯಿಂದ ಗೆದ್ದು ಬಂದಿದ್ದೇವೆ. ಹೆಲಿಕಾಫ್ಟರ್‍ನಲ್ಲಿ ಹೋಗಿ ಜನರನ್ನು ಮರಳು ಮಾಡಿ ಗೆದ್ದು ಬಂದಿಲ್ಲ. ಇಲ್ಲಿಂದ ಹೋಗುವಾಗ ಬಾಯಿಗೆ ಬಂದಂತೆ ಮಾತನಾಡಬಾರದು. ಇಲ್ಲಿಗೆ ಬರುವಾಗ ಒಂದು ಗುರಿ ಇರಬೇಕು. ಅದಕ್ಕಾಗಿ ಅಧ್ಯಯನ ಮಾಡಿ ಬರಬೇಕು. ಶೋಕಿಗೆ ಬಂದರೆ ಈ ರೀತಿಯ ಮಾತುಗಳು ಕೇಳಿ ಬರುತ್ತವೆ. ರಘು ಆಚಾರ್ ಅವರು ಪರಿಷತ್ ಪರಂಪರೆಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸದಸ್ಯರ ಒತ್ತಡಕ್ಕೆ ಮಣಿದ ರಘು ಆಚಾರ್ ಕೊನೆಗೆ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಸದನದ ಕ್ಷೇಮೆ ಯಾಚಿಸಿದರು.



