ಮೇಲ್ಮನೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಸಾಧ್ಯತೆ ಕ್ಷೀಣ

ಬೆಂಗಳೂರು : ಪೂರ್ವನಿಗದಿಯಂತೆ ಶುಕ್ರವಾರ ಮುಕ್ತಾಯಗೊಳ್ಳಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ತೀವ್ರ ಸಂಚಲನ ಮೂಡಿಸಿದ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಪರಿಷತ್ ನಲ್ಲಿ ಅಂಗೀಕಾರ ದೊರೆಯಲಿದೆಯೇ ? ಈ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಏಕೆಂದರೆ ವಿಧಾನಸಭೆಯಲ್ಲಿ ಅಂಗೀಕಾರ ರೂಪದಲ್ಲಿರುವ ಈ ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲೂ ಸರ್ಕಾರ ಅಂಗೀಕಾರ ಪಡೆಯಬೇಕಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿಧಾನಪರಿಷತ್ತಿನಲ್ಲಿ ಆಡಳಿತರೂಢ ಬಿಜೆಪಿಗೆ ಬಹುಮತ ಇಲ್ಲ. ಮೊನ್ನೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 11 ಸದಸ್ಯರು ಗೆಲುವು ಸಾಧಿಸಿದ್ದಾರೆ. ಆದರೆ ಅವರು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ.
ಬಿಜೆಪಿಯ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರೂ ಬಹುಮತಕ್ಕೆ ಒಬ್ಬ ಸದಸ್ಯರ ಕೊರತೆ ಆಡಳಿತ ಪಕ್ಷಕ್ಕಿದೆ. ಇನ್ನೂ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವುದು ಹೊಸ ವರ್ಷದ ನಂತರವೇ. ಏಕೆಂದರೆ ಹಳೇ ಸದಸ್ಯರ ಅವಧಿ ಜನವರಿ ಮೊದಲ ವಾರದವರೆಗೂ ಜಾರಿಯಲ್ಲಿರುತ್ತದೆ. ಹೀಗಾಗಿ ಪ್ರಸಕ್ತ ಚಳಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮೇಲ್ಮನೆಯಲ್ಲೂ ಅಂಗೀಕಾರವಾಗುವುದು ಅನುಮಾನ. ಮುಂದಿನ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗುವುದೇ ಕಾದು ನೋಡಬೇಕಿದೆ.
ಮೇಲ್ಮನೆಯಲ್ಲಿ ಪಕ್ಷಗಳ ಬಲಾಬಲ
ಕಳೆದ ನವೆಂಬರ್ 30ರಲ್ಲಿದ್ದಂತೆ ವಿಧಾನಪರಿಷತ್ತಿನ ಬಲಾಬಲಾ ಈ ರೀತಿ ಇದೆ. ಬಿಜೆಪಿಯ 32 ಸದಸ್ಯರಿದ್ದರೆ, ಕಾಂಗ್ರೆಸ್ ಪಕ್ಷದ 29 ಸದಸ್ಯರಿದ್ದಾರೆ, ಜೆಡಿಎಸ್ ನ 12 ಸದಸ್ಯರಿದ್ದಾರೆ. ಒಬ್ಬ ಪಕ್ಷೇತರ ಸದಸ್ಯರಿದ್ದು, ಒಂದು ಸ್ಥಾನ ಸಭಾಪತಿಯವರದ್ದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೇಲ್ಮನೆಯಲ್ಲಿ ಬಿಜೆಪಿ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮತಾಂತರ ನಿಷೇಧ ಕಾಯ್ದೆಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿವೆ.ವಿವಾದಾತ್ಮಕ ಕಾಯ್ದೆ ವಿಧಾನಪರಿಷತ್ತಿನಲ್ಲಿ ಅಂಗೀಕಾರವಾದರೆ ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದ ರಾಜ್ಯಗಳ ಪೈಕಿ ಕರ್ನಾಟಕ 9ನೇ ರಾಜ್ಯವಾಗಲಿದೆ.
