Breaking NewsLatestಬೆಳಗಾವಿರಾಜಕೀಯರಾಜ್ಯ

ವೈದ್ಯ ಶಿಕ್ಷಣದಿಂದ ಹಳ್ಳಿ ವಿದ್ಯಾರ್ಥಿಗಳನ್ನು ವಂಚಿತವಾಗಿಸುವ ಹುನ್ನಾರ: ಎಚ್​​ಡಿಕೆ

ಬೆಳಗಾವಿ: ವೈದ್ಯ ಶಿಕ್ಷಣವನ್ನು ಹಳ್ಳಿ ವಿದ್ಯಾರ್ಥಿಗಳಿಗೆ ʼನೀಟಾಗಿʼ ತಪ್ಪಿಸುವ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಅನುಮಾನ ಕಾಡುತ್ತಿದೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರಕಾರಕ್ಕೆ ʼನೀಟ್ʼ ವ್ಯವಸ್ಥೆಯನ್ನು ಹಾಳು ಮಾಡುವ ಬಗ್ಗೆ ಇದ್ದ ಉತ್ಸಾಹ ಸರಿ ಮಾಡಲು ಇಲ್ಲ ಎನ್ನುವುದು ವಿದ್ಯಾರ್ಥಿಗಳಿಗೆ ಮನವರಿಕೆಯಾಗಿದೆ ಎಂದಿದ್ದಾರೆ.

ಕುಮಾರಸ್ವಾಮಿ ಟ್ವೀಟ್ ವಿವರ ಈ ರೀತಿ ಇದೆ
“ಸಮಾನ ಶಿಕ್ಷಣ, ಸಮಾನ ಅವಕಾಶ”ಗಳ ಸಂವಿಧಾನದ ಆಶಯವನ್ನು ಕೇಂದ್ರ ಸರಕಾರ ಗಾಳಿಗೆ ಬಿಟ್ಟಿದೆ. ನಾಲ್ಕು ತಿಂಗಳಿನಿಂದ ವೈದ್ಯ ಸೀಟುಗಳು ಹಂಚಿಕೆಯಾಗಿಲ್ಲ. ಪರಿಣಾಮ ಎಂಜಿನಿಯರಿಂಗ್ ಕೌನ್ಸೆಲಿಂಗ್ ಕೂಡ ತಡವಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಮರ್ಪಕ ನಿರ್ವಹಣೆ, ಅದಕ್ಷತೆಗೆ ಹಿಡಿದ ಕನ್ನಡಿ ಇದು.

“ಉನ್ನತ ಶಿಕ್ಷಣ ಉಳ್ಳವರಿಗೆ ಮಾತ್ರವೇ?” ಇದೇ ಸತ್ಯ ಎನ್ನುವಂತೆ ಕೇಂದ್ರ ಸರಕಾರ ನಡೆದುಕೊಳ್ಳುತ್ತಿದೆ. ಗುಣಮಟ್ಟದ ಕೋಚಿಂಗ್‌ ಪಡೆಯಲು ಶಕ್ತಿ ಇಲ್ಲದ, ಆರ್ಥಿಕವಾಗಿ ದುರ್ಬಲರಾದ ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯ ಶಿಕ್ಷಣವನ್ನು ಶಾಶ್ವತವಾಗಿ ತಪ್ಪಿಸುವ ದುರಾಲೋಚನೆ ಈ “ವಿಳಂಬ ದ್ರೋಹ”ದ ಹಿಂದೆ ಇದೆಯಾ?

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರಕಾರಗಳು ಅಸಹಾಯತೆಯ ʼನಾಟಕʼವಾಡುತ್ತಾ ವಿದ್ಯಾರ್ಥಿ-ಪೋಷಕರನ್ನು ಯಾಮಾರಿಸುತ್ತಿವೆ. ನೀಟ್‌ ವಿಳಂಬದಿಂದ ವೈದ್ಯ, ಎಂಜಿನಿಯರಿಂಗ್‌ ಸೀಟುಗಳ “ಕಾಳಸಂತೆ ಬಿಕರಿ”ಗೆ ಸರಕಾರಗಳೇ ಅವಕಾಶ ಮಾಡಿಕೊಟ್ಟಂತೆ ಆಗಿದೆ. ಇದ್ಯಾವ ಸೀಮೆ ಶಿಕ್ಷಣ ನೀತಿ?

ರಾಜ್ಯ ಸರಕಾರ ಕೂಡಲೇ ಸುಪ್ರೀಂ ಕೋರ್ಟ್‌ʼಗೆ ಮನವಿ ಸಲ್ಲಿಸಿ ತ್ವರಿತ ತೀರ್ಪು ನೀಡುವಂತೆ ಮನವಿ ಮಾಡುವುದು ಸೇರಿ, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಭಾರತವನ್ನು ʼವಿಶ್ವಗುರುʼ ಮಾಡುವ ಉಮೇದಿನಲ್ಲಿರುವ ಕೇಂದ್ರವು, ಗ್ರಾಮೀಣ ವಿದ್ಯಾರ್ಥಿಗಳ ಹಿತ ಕಾಯಬೇಕು.

ನೀಟ್ ಅವ್ಯವಸ್ಥೆ ಬಗ್ಗೆ ರಾಜ್ಯ ಸರಕಾರವು ನೆರೆ ರಾಜ್ಯಗಳಂತೆ ದನಿಯೆತ್ತಬೇಕು. ಹಾಗೆ ಮಾಡದಿದ್ದರೆ, ಖಾಸಗಿ ವೈದ್ಯ ಕಾಲೇಜುಗಳ ಜತೆ ಸರಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಜನರು ಭಾವಿಸಬೇಕಾಗುತ್ತದೆ. ಉನ್ನತ ಶಿಕ್ಷಣ ಎಲ್ಲರ ಹಕ್ಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ,

Spread the love

Related Articles

Leave a Reply

Your email address will not be published. Required fields are marked *

Back to top button