ಕಾರವಾರ: ಪ್ಲೈ ಓವರ್ ಕಾಮಗಾರಿಯಲ್ಲಿ ಕಾರ್ಮಿಕರಿಗಿಲ್ಲ ಸುರಕ್ಷತೆ

ಕಾರವಾರ : ಕೋವಿಡ್ ಎರಡನೇ ಅಲೆಯ ಅಬ್ಬರ ಹಾಗೂ ವರುಣನ ಆರ್ಭಟದಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಪ್ರಾರಂಭಗೊಂಡಿವೆ. ಅದರಲ್ಲೂ ಕಾರವಾರ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಫ್ಲೈಓವರ್ ನಿರ್ಮಾಣ ಕಾಮಗಾರಿಯೂ ಭರದಿಂದ ಸಾಗುತ್ತಿದೆ.
ಆದರೆ ಕಾಮಗಾರಿಯಲ್ಲಿ ಉತ್ತರ ಭಾರತದ ಕಾರ್ಮಿಕರು ಮಾತ್ರ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸವಾರರು ಆತಂಕದಲ್ಲಿಯೇ ಸಂಚರಿಸುವಂತಾಗಿದೆ.
ನಗರಕ್ಕೆ ಹೊಂದಿಕೊಂಡು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ಕಾರಣಕ್ಕೆ ಫ್ಲೈ ಓವರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ನಗರದ ಲಂಡನ್ ಬ್ರಿಡ್ಜ್‌ನಿಂದ ಆರ್.ಟಿ.ಓ ಕಛೇರಿವರೆಗೆ ಸುಮಾರು 1.4 ಕಿ.ಮೀ ಉದ್ದದ ಫ್ಲೈಓವರ್ ಕೆಲಸ ನಡೆಯುತ್ತಿದೆ.
ಕೊರೋನಾ 2ನೇ ಅಲೆಯ ಬಳಿಕ ಸ್ಥಗಿತಗೊಂಡಿದ್ದ ಈ ಕಾಮಗಾರಿ ಸದ್ಯ ಪುನರಾರಂಭಗೊಂಡಿದೆ.
ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಯಾವುದೇ ಸುರಕ್ಷತೆ ವಹಿಸುತ್ತಿಲ್ಲ. ಕಾಮಗಾರಿಯ ವಸ್ತುಗಳನ್ನು ಹೆದ್ದಾರಿಯ ಅಕ್ಕಪಕ್ಕ ಎಲ್ಲೆಂದರಲ್ಲಿ ಎಸೆದಿದ್ದಾರೆ. ಒಂದೆಡೆ ಕಾರ್ಮಿಕರು ಅಪಾಯಕಾರಿಯಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಇನ್ನೊಂದೆಡೆ ರಸ್ತೆಯಲ್ಲಿ ಸಂಚರಿಸುವ ಸವಾರರು ಓಡಾಡಲು ಪರದಾಡಬೇಕಾದ ಪರಿಸ್ಥಿತಿ ಇದೆ. ಫ್ಲೈ ಓವರ್ ಕಾಮಗಾರಿ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಕಾರ್ಮಿಕರು ಸೇರಿದಂತೆ ವಾಹನ ಸವಾರರಿಗೂ ಸಹ ಅಪಾಯ ಎದುರಾಗುವ ಆತಂಕದ ವಾತಾವರಣ ಇದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.
ಫ್ಲೈ ಓವರ್ ನಿರ್ಮಾಣ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ. ಕೊರೋನಾ ಅಬ್ಬರ ಹಾಗೂ ಧಾರಾಕಾರ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇದೀಗ ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಹೆಲ್ಮೆಟ್ ಸೇರಿದಂತೆ ಸುರಕ್ಷತಾ ಸಾಧನಗಳನ್ನು ಧರಿಸದೇ ಕೆಲಸ ಮಾಡುತ್ತಿದ್ದು, ಕಾಮಗಾರಿ ಪ್ರದೇಶದ ಸುತ್ತ ಯಾವುದೇ ಬ್ಯಾರಿಕೇಡ್‌ಗಳನ್ನು ಅಳವಡಿಸಿಲ್ಲ. ಕಾಮಗಾರಿ ಪ್ರದೇಶಕ್ಕೆ ಹೊಂದಿಕೊಂಡೇ ಸದ್ಯ ಸರ್ವೀಸ್ ರಸ್ತೆಯಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದರಿಂದ ಅಪಾಯ ಎದುರಾಗುವ ಆತಂಕವಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ನೀಡಬೇಕು ಎನ್ನುವ ಕಾನೂನು ಇದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆ ಕಂಪೆನಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.
ಆಮೆಗತಿಯಲ್ಲಿ ಸಾಗುತ್ತಿದ್ದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಚುರುಕು ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದ್ರೂ ಸಹ ಕಾರ್ಮಿಕರ ಸುರಕ್ಷತೆ ಕುರಿತು ನಿರ್ಲಕ್ಷ್ಯ ವಹಿಸಿರುವುದು ದುರಂತವಾಗಿದೆ. ಇನ್ನಾದರೂ ಸಂಬಂಧಪಟ್ಟ ಗುತ್ತಿಗೆ ಕಂಪೆನಿ ಕಾರ್ಮಿಕರಿಗೆ ಸುರಕ್ಷಾ ಸಾಧನಗಳನ್ನು ನೀಡುವುದರ ಜೊತೆಗೆ ಹೆದ್ದಾರಿ ಸವಾರರ ಸುರಕ್ಷತೆ ಕುರಿತು ಗಮನ ಹರಿಸಬೇಕಿದೆ.




