ಶಿರಸಿಯಲ್ಲಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಬ್ರಾಹ್ಮಣ ಯುವತಿ: ಅದಕ್ಕೆ ಇದೀಗ ಲವ್ ಜಿಹಾದ್ ಪಟ್ಟ

ಕಾರವಾರ : ಕಾಲೇಜು ಅಂದಾಕ್ಷಣ ಅಲ್ಲಿ ಪ್ರೀತಿ, ಪ್ರೇಮ ಎನ್ನುವುದು ಮಾಮೂಲು. ಅದರಲ್ಲೇನೂ ಅಂತಹ ವಿಶೇಷತೆಯೇನಿಲ್ಲ. ಆದರೆ ಇಲ್ಲಿ ಎರಡು ಧರ್ಮಗಳ ವಿದ್ಯಾರ್ಥಿಗಳು ಲವ್ ಮಾಡಿಕೊಂಡು ಪಜೀತಿಗೆ ಬಿದ್ದಿದ್ದಾರೆ. ಈಗ ಯುವತಿಯ ಕುಟುಂಬ ಈ ಪ್ರೀತಿಗೆ ತಿರುಗಿ ಬಿದ್ದಿದ್ದು, ಸಂಘರ್ಷವಾಗುವ ಲಕ್ಷಣಗಳಿವೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂತಹದೊಂದು ಘಟನೆಗೆ ಸಾಕ್ಷಿಯಾಗಿದ್ದು, ಪ್ರಕರಣ ಠಾಣೆಯ ಮೆಟ್ಟಿಲೇರಿದೆ.
ಘಟನೆಯ ವಿವರ:
ಶಿರಸಿ ನಗರದ ಜಾಫರ್ ಶೇಖ್ (20) ಎಂಬ ವಿದ್ಯಾರ್ಥಿ ನಗರದ ಎಂ.ಎಂ.ಆರ್ಟ್ಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ.ವ್ಯಾಸಂಗ ಮಾಡುತ್ತಿದ್ದಾನೆ. ಈತ ನಗರದ ಎಂ.ಇ. ಎಸ್ ಕಾಮರ್ಸ್ ಕಾಲೇಜಿನಲ್ಲಿ ಓದುತ್ತಿರುವ ಬ್ರಾಹ್ಮಣ ಯುವತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾನೆ. ಈ ಸ್ನೇಹ ಪ್ರೀತಿಗೆ ತಿರುಗಿದೆ. ಕೆಲವು ವರ್ಷಗಳಿಂದ ಇಬ್ಬರ ನಡುವೆ ಸಲುಗೆಯಿತ್ತು. ಅದು ಪ್ರೀತಿಯಾಗಿ ಬದಲಾಗಿದೆ. ಆದರೆ ಇವರ ಸಂಪರ್ಕದಲ್ಲಿ ಇರುವವರು ಹೇಳುವಂತೆ ಇಬ್ಬರೂ ಪ್ರೀತಿ,ಸಲುಗೆಯಲ್ಲಿ ಇದ್ದರು ಎಂದಷ್ಟೇ ಮಾಹಿತಿಗಳಿವೆ.ಯುವಕ ತನ್ನನ್ನು ಪ್ರೀತಿಸುವಂತೆ ಕೈ ಹಿಡಿದು ಎಳೆದಿದ್ದಾನೆ ಎಂದು ಶಿರಸಿ ಠಾಣೆಯಲ್ಲಿ ಒಂದು ತಿಂಗಳ ನಂತರ ಯುವತಿ ದೂರು ನೀಡಿದ್ದಾಳೆ. ಇನ್ನು ಯುವಕನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಕಾಲೇಜಿನಿಂದ ಆ ಯುವಕನನ್ನು ಅಮಾನತು ಮಾಡಲಾಗಿದೆ.
ದಿನಾಂಕ 26/11/21 ರಂದು ರಾತ್ರಿ 8 – 30 ಗಂಟೆಗೆ ಫಿರ್ಯಾದುದಾರರು ಠಾಣೆಗೆ ಹಾಜರಾಗಿ ಶಿರಸಿಯ ಜಾಫರ್ ಶೇಖ್ ಪ್ರಾಯ 20 ವರ್ಷ.ಈತ ಕಾಲೇಜಿನ ವಿದ್ಯಾಭ್ಯಾಸ ಮಾಡಬೇಕಾದರೆ ಪರಿಚಯವಿದ್ದನು.ಕಳೆದ ಒಂದು ತಿಂಗಳ ಹಿಂದೆ ಪಿರ್ಯಾದಿಯವರು ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಪುನಃ ಶಿರಸಿಗೆ ಬರಲು ಯಡಳ್ಳಿ ಬಸ್ ನಿಲ್ದಾಣದ ಹತ್ತಿರ ಬಸ್ಸಿಗೆ ನಿಂತು ಕಾಯುತ್ತಿದ್ದಾಗ ಆರೋಪಿತ ಜಾಫರ್ ಎಂಬಾತ ಹತ್ತಿರ ಬಂದು ಫಿರ್ಯಾದಿಗೆ ತನ್ನನ್ನು ಪ್ರೀತಿಸುವಂತೆ ಕೈ ಹಿಡಿದು ಎಳೆದು ಪೀಡಿಸಿದ್ದಾನೆ.ಈ ಕಾರಣಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಿರಸಿ ಗ್ರಾಮೀಣ ಠಾಣೆ ಗುನ್ನಾ ನಂಬರ್ -116/2021 ಕಲಂ 354,504,506 ಐಪಿಸಿ ನೇದರಂತೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಲವ್ ಜಿಹಾದ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋ ವೈರಲ್
ಇಬ್ಬರ ನಡುವೆ ಸ್ನೇಹ ಇತ್ತು. ಇಬ್ಬರೂ ಚೆನ್ನಾಗಿ ಪರಿಚಯವಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಇಬ್ಬರ ಸ್ನೇಹದ ಬಗ್ಗೆ ತಿಳಿಯುತ್ತಿದ್ದಂತೆ ಯುವತಿ ಮನೆಯಲ್ಲಿ ಆಕೆಗೆ ಬುದ್ದಿ ಹೇಳಿದ್ದರು ಎಂಬ ಮಾತು ಸಹ ಕೇಳಿಬಂದಿದೆ. ಇದರ ನಡುವೆ ಯುವಕ ಅನ್ಯ ಕೋಮಿನವನಾದ್ದರಿಂದ ಈ ವಿಷಯ ಹಲವು ತಿರುವು ಪಡೆದುಕೊಂಡಿದೆ. ಕಾಲೇಜಿಗೆ ಕೆಲವು ಹಿಂದೂ ಸಂಘಟನೆಗಳು ತೆರಳಿ ತರಾಟೆ ತೆಗೆದುಕೊಂಡ ಪರಿಣಾಮ ಯುವಕನನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಯುವತಿ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಯುವಕ ಪಾರಾರಿಯಾಗಿದ್ದಾನೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋವನ್ನು ಹಾಕಿ “ಲವ್ ಜಿಹಾದ್” ಶಿರಸಿ ಹಿಂದೂ ಸಂಘಟನೆ ಇತ್ತ ಗಮನ ಹರಿಸಬೇಕು. ಹಿಂದೂ ಯುವತಿಯ ಪ್ರೇಮಕಥೆ ಎಂಬ ಟ್ಯಾಗ್ ನೊಂದಿಗೆ ವೈರಲ್ ಮಾಡಲಾಗಿದೆ. ಇದೀಗ ಶಿರಸಿಯಲ್ಲಿ ಇದೇ ಸುದ್ದಿ ಗಲ್ಲಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ಎರಡು ಕೋಮುಗಳ ನಡುವೆ ಬೆಂಕಿ ಹೊತ್ತಿ ಉರಿಯುವ ಮುನ್ನ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.




