ರಾಮನಗರ

ಜೆಡಿಎಸ್ ವತಿಯಿಂದ ಜಲಧಾರೆ ಕಾರ್ಯಕ್ರಮ: ಎಚ್​ಡಿಕೆ

ರಾಮನಗರ: ನಾಡಿನ ಸುಭೀಕ್ಷೆಗಾಗಿ ರಾಜ್ಯದ ೩೮ ಜೀವನದಿಗಳ ನೀರನ್ನು ಸಂಗ್ರಹಿಸಿ ಒಂದು ವರ್ಷಗಳ ಕಾಲ ಪೂಜಿಸುವ “ಜಲಧಾರೆ” ಎಂಬ ವಿನೂತನ ಕಾರ್ಯಕ್ರಮವನ್ನು ಪಕ್ಷದ ವತಿಯಿಂದ ಜನವರಿಯಲ್ಲಿ ಹಮ್ಮಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬಿಡದಿ ಪುರಸಭೆ ೭ನೇ ವಾರ್ಡು ವ್ಯಾಪ್ತಿಯ ಕೇತಗಾನಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮದೇವತೆ ನೂತನ ದೇವಾಲಯ ಉದ್ಘಾಟನೆ, ಮಾರಮ್ಮ ಮೂರ್ತಿ ಪ್ರತಿಷ್ಠಾಪನೆ, ದೇವಾಲಯ ಸಂಪೋಕ್ಷಣೆ ಹಾಗೂ ಕುಂಬಾಭೀಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲಾ ಭಾಗದ ಜೀವನದಿಗಳ ನೀರನ್ನು ಸಂಗ್ರಹಿಸಿ ತಂದು ಪೂಜಿಸುವ ಮೂಲಕ ನದಿಗಳು ಮತ್ತು ಕೆರೆ-ಕಟ್ಟೆಗಳ ಸಂರಕ್ಷಣೆ ಹಾಗೂ ಪಾವಿತ್ರತೆ ಕಾಪಾಡುವಂತೆ ಜನರ ಗಮನ ಸೆಳೆಯಲಾಗುವುದು. ಜೀವನದಿಗಳ ನೀರನ್ನು ಕುಂಭಗಳಲ್ಲಿ ಸಂಗ್ರಹಿಸಿ ಒಂದು ವರ್ಷಗಳ ಕಾಲ ಪೂಜಿಸುವ ಕಾರ್ಯಕ್ರಮ ಇದಾಗಿದ್ದು, ಬೆಂಗಳೂರಿನಲ್ಲಿ ೨೦೨೨ರ ಜನವರಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ನದಿಗಳು, ಕೆರೆ-ಕಟ್ಟೆಗಳು ನಿರ್ಲಕ್ಷಕ್ಕೆ ಒಳಗಾಗಿ ನೀರು ಕಲುಷಿತವಾಗುತ್ತಿದ್ದು ಕುಡಿಯಲು ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ತುಂಬಿಸುತ್ತಿರುವ ಕ್ರಮ ಅವೈಜ್ಞಾನಿಕ ಇದರಿಂದ ಯಾವ ಪ್ರಯೋಜನವೂ ಇಲ್ಲ. ಕೊಳಚೆ ನೀರನ್ನು ಕೆರೆಗಳಿಗೆ ಹರಿಸುವ ಬದಲಾಗಿ ಕೆರೆ-ಕಟ್ಟೆಗಳು ಹಾಗೂ ರಾಜಕಾಲುವೆಗಳ ಸಂರಕ್ಷಣೆ ಮಾಡುವುದು ತೀರಾ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿ ಕುಟುಂಬಕ್ಕೂ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಎಲ್ಲಾ ವರ್ಗದ ಮಕ್ಕಳಿಗೆ ೧೨ನೇ ತರಗತಿವರೆಗೆ ಉಚಿತ ಶಿಕ್ಷಣದ ಪ್ರಯೋಜನ ದೊರಕಿಸಿಕೊಡುವ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವುದು. ಬಿಡದಿಯಲ್ಲಿ ನಡೆದ ಜನತಾ ಪರ್ವ ೧.೦ ಸಂಘಟನಾ ಕಾರ್ಯಾಗಾರದಲ್ಲಿ ತೆಗೆದುಕೊಂಡ ನಿರ್ಣಯದಂತೆ “ಪಂಚರತ್ನ” ಮಹತ್ವಾಕಾಂಕ್ಷೆ ಯೋಜನೆಯ ಕುರಿತು ಜನರಿಗೆ ತಿಳಿಸಿಕೊಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಬಿಡದಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಜಮೀನು ಮತ್ತು ತೋಟದ ಮನೆ ಹೊಂದಿರುವುದರಿಂದ ನಮ್ಮ ಕುಟುಂಬವರು ಕೂಡ ಈ ಗ್ರಾಮದವರೇ ಆಗಿದ್ದೇವೆ. ಸುಮಾರು ಐವತ್ತು ವರ್ಷಗಳ ರಾಜಕೀಯ ಅನುಭವ ಇದ್ದರೂ ನಮ್ಮ ತಂದೆ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಬಿಡದಿಯಲ್ಲಿ ನಾವು ಜಮೀನು ಖರೀಧಿಸಿದ ಬಳಿಕ ಅವರು ರಾಮನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆದರು. ನಂತರ ಪ್ರಧಾನ ಮಂತ್ರಿ ಆಗುವ ಅವಕಾಶ ದೊರೆಯಲು ಈ ಮಣ್ಣು ಕಾರಣ, ಹೀಗಾಗಿ ಕೇತಗಾನಹಳ್ಳಿ ನಮ್ಮ ಕುಟುಂಬಕ್ಕೆ ಪುಣ್ಯಭೂಮಿ ಎಂದು ಕುಮಾರಸ್ವಾಮಿ ತಿಳಿಸಿದರು.

ಬಿಡದಿಯಲ್ಲಿ ಜಮೀನು ಖರೀದಿಸಿದ್ದರಿಂದಲೇ ತಾವೂ ಕೂಡ ರಾಮನಗರ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಲು ಸಾಧ್ಯವಾಯಿತು. ಬಿಡದಿಯ ಮಣ್ಣು ತಮ್ಮ ಭವಿಷ್ಯ ಬರೆದಿರುವುದರಿಂದ ಮುಂದಿನ ತಮ್ಮ ಎಲ್ಲಾ ರಾಜಕೀಯ ಚಟುವಟಿಕೆಗಳು ಬಿಡದಿಯ ತೋಟದ ಮನೆಯಿಂದಲೇ ನಡೆಯಲಿವೆ. ಭವಿಷ್ಯದಲ್ಲಿ ತಮಗೆ ಯಾವ ಸ್ಥಾನ ಮಾನ ದೊರೆತರೂ ಕೂಡ ಬಿಡದಿಯ ತೋಟದ ಮನೆಯಲ್ಲಿಯೇ ವಾಸ್ತವ್ಯ ಇರುವುದಾಗಿ ಮುಂದಿನ ಜೀವಿತಾವಧಿ ಕಳೆಯುವುದಾಗಿ ಕುಮಾರಸ್ವಾಮಿ ಘೋಷಿಸಿದರು.

ಇದೇ ವೇಳೆ ಕೇತಗಾನಹಳ್ಳಿ ಗ್ರಾಮದಲ್ಲಿ ನೆಲೆಸಲು ಜಮೀನು ನೀಡಿದ ರೈತರನ್ನು ಸ್ಮರಿಸಿದ ಅವರು ಕೃತಜ್ಞತೆ ಸಲ್ಲಿಸಿದರು. ದೇವಾಲಯದ ೪೮ನೇ ದಿನದ ಕಾರ್ಯಕ್ರಮವನ್ನು ಕೇತಗಾನಹಳ್ಳಿಯಲ್ಲಿ ತಮ್ಮ ಕುಟುಂಬದ ವತಿಯಿಂದ ಹಮ್ಮಿಕೊಳ್ಳುವುದಾಗಿ, ತಮ್ಮ ಪುತ್ರ ನಿಖಿಲ್ ಮದುವೆಯ ಊಟ ಹಾಕಲು ಅವಕಾಶ ಸಾಧ್ಯವಾಗದ ಕೊರಗು ತಮ್ಮಲ್ಲಿರುವುದರಿಂದ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಸ್ವಾಮಿ ಕಾರ್ಯ ಸ್ವಕಾರ್ಯ ನೆರವೇರಿಸುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಮಾಗಡಿ‌ ಶಾಸಕ ಎ. ಮಂಜುನಾಥ್, ಅದಿ ಚುಂಚನಗಿರಿ ಮಠದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಹಾ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಸೇರಿದಂತೆ ಹಲವರು ಹಾಜರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button