Breaking NewsLatestಉತ್ತರ ಕನ್ನಡರಾಜ್ಯ

ಉತ್ತರ ಕನ್ನಡ: ಹೆಚ್ಚುತ್ತಿವೆ ಮಹಿಳೆಯರು, ಯುವತಿಯರ ನಾಪತ್ತೆ ಪ್ರಕರಣಗಳು

ಕಾರವಾರ : ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.ಅದರಲ್ಲಿಯೂ ಕಾಲೇಜು ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿದ್ದಾರೆ.ಕಳೆದ 11 ತಿಂಗಳ ಅವಧಿಯಲ್ಲಿ 200 ಕ್ಕೂ ಅಧಿಕ ನಾಪತ್ತೆ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದು,ಇಲ್ಲಿಯ ಜನ ಶಾಂತ ಸ್ವಭಾವದವರು ಎನ್ನುವ ಖ್ಯಾತಿ ಗಳಿಸಿಕೊಂಡಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯುವತಿಯರು,ಮಹಿಳೆಯರ ನಾಪತ್ತೆ ಪ್ರಕರಣಗಳು ಸಾಕಷ್ಟು ಸದ್ದು ಮಾಡುತ್ತಿವೆ ಕಳೆದ 11 ತಿಂಗಳ ಅವಧಿಯಲ್ಲಿ ಇನ್ನೂರಕ್ಕೂ ಅಧಿಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು,ಬಹುತೇಕ ಪ್ರಕರಣಗಳು ಗ್ರಾಮೀಣ ಭಾಗದಲ್ಲಿಯೇ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ 2019 ರಲ್ಲಿ 257 ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು.ಈ ಪೈಕಿ 236 ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕಿದ್ದರೆ,ಇನ್ನು 21 ತನಿಖೆ ಹಂತದಲ್ಲಿದ್ದವು.2020 ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ 212 ನಾಪತ್ತೆ ಪ್ರಕರಣ ದಾಖಲಾಗಿ 197 ಮಂದಿ ಪತ್ತೆಯಾಗಿದ್ದರು.15 ಮಂದಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ.

ಕಳೆದೆರಡು ವರ್ಷದಲ್ಲಿ ನಾಪತ್ತೆ ಪ್ರಕರಣದ ಅಂಕಿ – ಅಂಶ ಕಡಿಮೆ ಎನ್ನುವಂತಿದ್ದರೆ, ಪ್ರಸ್ತುತ 2021ರ ಅಂಕಿ – ಅಂಶ ಆತಂಕ ಮೂಡಿಸುವಂತಿದೆ. 2021ರಲ್ಲಿ ನವೆಂಬರ್ ತಿಂಗಳನ್ನ ಹೊರತುಪಡಿಸಿ 11 ತಿಂಗಳ ಅವಧಿಯಲ್ಲಿ 232 ಪ್ರಕರಣ ದಾಖಲಾಗಿವೆ.ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಯುವತಿಯರ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಜಿಲ್ಲೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳಲ್ಲಿ ಬಹುತೇಕ ಕೇಸ್‌ಗಳು ಪ್ರೀತಿ – ಪ್ರೇಮ,ಅನೈತಿಕ ಸಂಬಂಧದಂತಹ ವೈಯಕ್ತಿಕ ಕಾರಣಗಳಿಂದಾಗಿ ಮನೆಬಿಟ್ಟು ಹೋದವರಾಗಿದ್ದಾರೆ‌.ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಅಪಹರಣದ ಶಂಕೆ ಇದ್ದು,ಇನ್ನೂ ಕೆಲವು ಮಾನಸಿಕವಾಗಿ ಅಸ್ವಸ್ಥಗೊಂಡು ನಾಪತ್ತೆಯಾದವುಗಳಾಗಿದೆ. ಈ ನಾಪತ್ತೆ ಪ್ರಕರಣಗಳಲ್ಲಿ ವಿವಾಹಿತ ಮಹಿಳೆಯರು,ಶಾಲಾ,ಕಾಲೇಜು ಯುವತಿಯರು ಹೆಚ್ಚಾಗಿದ್ದು,ಇದಕ್ಕೆ ಸಾಮಾಜಿಕ ಜಾಲತಾಣಗಳೇ ಕಾರಣ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಇನ್ನೂ ಪತ್ತೆಯಾಗದ ಹಳೆ ಪ್ರಕರಣಗಳು ಸಾಕಷ್ಟಿವೆ ಎಂಬುದು ಗಮನಕ್ಕೆ ಬಂದಿದೆ.ಈ ವರ್ಷದಿಂದ ಇನ್ನೂ ಪತ್ತೆಯಾಗದ ಪ್ರಕರಣಗಳಿಗೆ ಹೆಚ್ಚು ಮಹತ್ವ ನೀಡಿ,ಅವರನ್ನು ಪತ್ತೆ ಮಾಡುವ ಕಾರ್ಯ ಮಾಡಲಾಗುವುದು.ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಲಾಗುವುದು ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button