ಉತ್ತರ ಕನ್ನಡಜಿಲ್ಲಾ ಸುದ್ದಿ

ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಾರದ ಸಂಸದ ಅನಂತಕುಮಾರ್ ಹೆಗಡೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ಏರತೊಡಗಿದೆ. ಬಿಜೆಪಿಯಿಂದ ಗಣಪತಿ ಉಳ್ವೇಕರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ ಪ್ರಚಾರ ಪ್ರಾರಂಭಿಸಿದ್ದಾರೆ. ಆದರೆ ಬಿಜೆಪಿಯಲ್ಲಿನ ಭಿನ್ನಮತ ಉಳ್ವೇಕರ್ ಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.

ಗಣಪತಿ ಉಳ್ವೇಕರ್ ಗೆ ಟಿಕೆಟ್ ಎಂಬುದು ಗೊತ್ತಾಗುತ್ತಿದ್ದಂತೆ ಸಂಸದ ಅನಂತಕುಮಾರ್ ಹೆಗಡೆ ಜಿಲ್ಲೆಯ ಪಕ್ಷದ ಮುಖಂಡರಿಂದ ಅಂತರ ಕಾಪಾಡಿಕೊಂಡು ತಟಸ್ಥರಾಗಿದ್ದಾರೆ. ಉಳ್ವೇಕರ್ ನಾಮಪತ್ರ ಸಲ್ಲಿಕೆ ವೇಳೆಯಲ್ಲಿಯೂ ಅಂತರ ಕಾಪಾಡಿಕೊಂಡಿದ್ದರು.ಈ ವಿಷಯ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗೀಡಾಗಿದೆ.

ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುವಂತೆ ಸ್ಥಳೀಯ ಮುಖಂಡರು ಸಂಸದರನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ಅನಂತ್ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎನ್ನಲಾಗಿದೆ. ಇನ್ನು ಹೇಗಾದರೂ ಮಾಡಿ ಪ್ರಚಾರಕ್ಕೆ ಕರೆತರಬೇಕು ಎಂದು ಕೆಲವು ಆಪ್ತರು ಮಾಡಿದ ಪ್ರಯತ್ನ ಫಲಕಾರಿಯಾಗಿಲ್ಲ.

ಈ ಹಿಂದೆ ಜಿಲ್ಲೆಯಲ್ಲಿ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಸಂಸದರ ಮಾತು ಕೇಳಬೇಕಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಹ ಸಂಸದರ ಮಾತಿನಂತೆ ಟಿಕೆಟ್ ನೀಡಲಾಗಿತ್ತು.ಹೀಗಾಗಿ ಖುದ್ದು ಮುತುವರ್ಜಿ ವಹಿಸಿ ತಾವು ಟಿಕೆಟ್ ಕೊಡಿಸಿದ ಜನರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು‌. ಬಿಜೆಪಿಯಲ್ಲಿ ರಾಜಕೀಯ ಬದಲಾವಣೆ ಆದ ನಂತರ ಜಿಲ್ಲೆಯ ನಾಯಕರಲ್ಲೂ ಹಲವು ಬಿನ್ನಾಭಿಪ್ರಾಯಗಳು ಏಳತೊಡಗಿದೆ. ಪಕ್ಷದಲ್ಲಿ ರಾಜಕೀಯ ಹಿಡಿತಕ್ಕೆ ನಾಯಕರ ಮುಸುಕಿನ ಗುದ್ದಾಟ ತಾರಕಕ್ಕೆ ಏರಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೇ ತಿಂಗಳು ಯಲ್ಲಾಪುರದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಜನ ಸ್ಪರಾಜ್ ಸಮಾವೇಶದಲ್ಲಿ ಅನಂತಕುಮಾರ್ ಹೆಗಡೆ ಗೈರು ಎದ್ದು ಕಾಣುತ್ತಿತ್ತು. ಇನ್ನು ಪರಿಷತ್ ಅಭ್ಯರ್ಥಿ ಆಯ್ಕೆಯಲ್ಲೂ ಹೆಗಡೆ ಮಾತು ನಡೆಯದಿರುವುದು ಒಳ ಮುನಿಸಿಗೆ ಕಾರಣ ಎನ್ನಲಾಗಿದೆ. ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಸಂಸದರು ಗೈರಾಗಿದ್ದರು.

ಸಂಸದರ ಆಪ್ತ ಮೂಲಗಳ ಪ್ರಕಾರ ಉಳ್ವೇಕರ್ ಪರ ಪ್ರಚಾರಕ್ಕೆ ಸಂಸದರು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ನ.26 ಕ್ಕೆ ಅಂದರೆ ಇಂದು ಬೆಂಗಳೂರಿನಿಂದ ದೆಹಲಿಗೆ ಅನಂತಕುಮಾರ ಪ್ರಯಾಣ ಬೆಳೆಸಲಿದ್ದಾರೆ. ನ.29 ರಿಂದ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಡಿ.13 ರಂದು ಅಧಿವೇಶನ ಮುಗಿಯಲಿದ್ದು, ಡಿಸೆಂಬರ್ 15 ಕ್ಕೆ ಮರಳಿ ಶಿರಸಿ ಅಥವಾ ಬೆಂಗಳೂರಿಗೆ ಮರಳಿ ಬರಲಿದ್ದಾರೆ.ಈ ಮಧ್ಯೆ ಅವಕಾಶ ದೊರೆತರೆ ಡಿ.10 ಕ್ಕೆ ಶಿರಸಿಯಲ್ಲಿ ಮತದಾನ ಮಾಡಲಿದ್ದಾರೆ ಎಂಬ ಮಾಹಿತಿ ಅವರ ಆಪ್ತ ವಲಯಗಳಿಂದ ತಿಳಿದುಬಂದಿದೆ.

ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ. ಇಂದು ಶಿರಸಿ, ಸಿದ್ದಾಪುರ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಇದೀಗ ಕ್ಷೇತ್ರದಲ್ಲಿ ಭೀಮಣ್ಣನವರ ಪರ ಒಲವು ಕೇಳಿಬರುತ್ತಿವೆ. ಕರಾವಳಿ ಭಾಗದಲ್ಲಿಯೂ ಪಕ್ಷಕ್ಕಿಂತ ವ್ಯಕ್ತಿ ಬಗ್ಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಬಾಯಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತಿದೆ.

ಗಣಪತಿ V/S ಭೀಮಣ್ಣ

ಬಿಜೆಪಿ ಪಕ್ಷದ ಬಗ್ಗೆ ಅಭಿಮಾನ ಇರುವ ಕೆಲವರು, ನಾವು ಉಳ್ವೇಕರ್ ಗೆ ಮತ ನೀಡುತ್ತೇವೆ ಎಂದು ಹೇಳಿದರೆ,ಭೀಮಣ್ಣ ಉತ್ತಮ ಅಭ್ಯರ್ಥಿ, ಒಳ್ಳೆ ಮನುಷ್ಯ, ಹಲವು ಬಾರಿ ಸೋತಿದ್ದಾರೆ,ಈ ಬಾರಿ ಅವರನ್ನು ಗೆಲ್ಲಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.ಇದರ ಜೊತೆಗೆ ಜಾತಿ ಲೆಕ್ಕಾಚಾರ ಸಹ ಜೋರಾಗಿ ನಡೆಯುತ್ತಿದೆ.

ಭೀಮಣ್ಣ ನಾಯ್ಕ ಅವರು ನಾಮಧಾರಿ ಸಮಾಜದವರಾಗಿದ್ದರೆ, ಗಣಪತಿ ಉಳ್ವೇಕರ್ ಹರಿಕಾಂತ ಸಮಾಜಕ್ಕೆ (ಮೀನುಗಾರ ಸಮುದಾಯ) ಸೇರಿದವರು. ಉಳ್ವೇಕರ್ ರಾಜಕೀಯಕ್ಕೆ ಬರುವ ಮುನ್ನ ದಿವಂಗತ ವಸಂತ ಅಸ್ನೋಟಿಕರ್ ಅವರ ಬಲಗೈ ಬಂಟನಾಗಿ ಗುರುತಿಸಿಕೊಂಡವರು. ಆಗ ವಸಂತ ಅಸ್ನೋಟಿಕರ್ ಕೂಡ ರಾಜಕೀಯಕ್ಕೆ ಬಂದಿರಲಿಲ್ಲ. ವಸಂತ ನಿಧನಾ ನಂತರವೂ ಕೆಲಕಾಲ ಆ ಕುಟುಂಬದೊಂದಿಗೆ ಬಾಂಧವ್ಯ ಹೊಂದಿದ್ದ ಉಳ್ವೇಕರ್ ತದ ನಂತರ ಅಲ್ಲಿ ಮುನಿಸಿಕೊಂಡು ಬಿಜೆಪಿ ಸೇರಿಕೊಂಡಿದ್ದರು. ಎರಡು ಬಾರಿ ಕಾರವಾರ ನಗರಸಭೆ ಅಧ್ಯಕ್ಷರಾಗಿದ್ದ ಉಳ್ವೇಕರ್ ತಮ್ಮ ರೌಡಿಸಂನಿಂದ ಕಾರವಾರ ನಗರದಲ್ಲಿ ಭಯದ ವಾತಾವರಣವನ್ನು ಹುಟ್ಟು ಹಾಕಿದ್ದರು.

ಇದಕ್ಕೆ ತದ್ವಿರುದ್ದ ವ್ಯಕ್ತಿತ್ವ ಭೀಮಣ್ಣ ನಾಯ್ಕ ಅವರದು. ಚುನಾವಣೆಯಲ್ಲಿ ಮೂರು ಬಾರಿ ಸೋತರೂ ಧೃತಿಗೆಡದೇ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ 12 ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಭೀಮಣ್ಣ ನಾಯ್ಕ ಅವರು ಯಾವುದೇ ಪಕ್ಕದಲ್ಲಿದ್ದರೂ ಪಕ್ಷದ ಕಟ್ಟಾಳುವಾಗಿ ನಿಷ್ಠೆಯಿಂದ ಇರುತ್ತಾರೆನ್ನುವುದೇ ಅವರ ವಿಶೇಷವಾಗಿದೆ. ಜಿಲ್ಲೆಯಲ್ಲಿ ಭೀಮಣ್ಣನವರಿಗಿರುವಷ್ಟು ಜನಪ್ರಿಯತೆ ಉಳ್ವೇಕರ್ ಗೆ ಇಲ್ಲದಿರುವುದೇ ಬಿಜೆಪಿಗೆ ಹಿನ್ನಡೆಯಾಗಿದೆ. ಜಿಲ್ಲೆಯ ಜೆಡಿಎಸ್ ಜನಪ್ರತಿನಿಧಿಗಳು ಕೂಡ ಭೀಮಣ್ಣ ನಾಯ್ಕ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಇನ್ನು ಸಂಸದರ ಮೌನ ಸಹ ಬಿಜೆಪಿ ಅಭ್ಯರ್ಥಿಗೆ ದೊಡ್ಡ ಹೊಡೆತ ನೀಡಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಮುನಿಸಿಕೊಂಡವರು ಸಹ ಭೀಮಣ್ಣನವರ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ. ಹೀಗಾಗಿ ಗೆಲ್ಲುವ ಕುದುರೆ ಭೀಮಣ್ಣ ನಾಯ್ಕ ಅವರೇ ಎಂದು ಹೇಳಲಾಗುತ್ತಿದೆ. ಮುಂದೆ ಯಾರು ಗೆಲ್ಲುತ್ತಾರೆ ಎನ್ನುವುದು ಚುನಾವಣೆ ನಂತರವಷ್ಟೇ ತಿಳಿದು ಬರಲಿದೆ.

Related Articles

Leave a Reply

Your email address will not be published. Required fields are marked *

Back to top button