ಬಿಬಿಎಲ್: ಹರ್ಮನ್ ಪ್ರೀತ್ ಕೌರ್ ಪ್ಲೇಯರ್ ಆಫ್ ದಿ ಟೂರ್ನಿ

ಮೆಲ್ಬೋರ್ನ್ : ಭಾರತ ಮಹಿಳಾ ತಂಡದ ಆಲ್ರೌಂಡರ್ ಹರ್ಮನ್ ಪ್ರೀತ್ ಕೌರ್ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳೆಯರ ಬಿಗ್ ಬ್ಯಾಷ್ ಲೀಗ್ ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಮೆಲ್ಬೋರ್ನ್ ರಿನೆಗೇಡ್ಸ್ ಪರ ಆಡಿರುವ ಕೌರ್, 12 ಪಂದ್ಯಗಳಲ್ಲಿ 11 ಇನಿಂಗ್ಸ್ ಗಳಲ್ಲಿ 399 ರನ್, 66.50 ಸರಾಸರಿ ಮತ್ತು 135.25 ಸ್ಟ್ರೈಕ್ ರೇಟ್ ಸಾಧನೆ ಮಾಡಿದ್ದಾರೆ.
ಬೌಲಿಂಗ್ ನಲ್ಲಿ 12 ಪಂದ್ಯಗಳನ್ನಾಡಿ, 15 ವಿಕೆಟ್ ಗಳಿಸಿರುತ್ತಾರೆ. ಭಾರತ ಟಿ20 ತಂಡದ ನಾಯಕಿ ಕೌರ್, ಕಳೆದ ಬಾರಿ ಸಿಡ್ನಿ ಥಂಡರ್ ಪರ ಆಡಿದ್ದು ಎರಡು ವರ್ಷಗಳ ನಂತರ ಮಹಿಳಾ ಬಿಗ್ ಬ್ಯಾಷ್ ಪ್ರವೇಶಿಸಿದ್ದರು. ಸೋಫೆ ಡಿವೈನ್ ಕಳೆದ ಎರಡು ಋತುಗಳಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದು, ಈ ಬಾರಿ ಕೌರ್ ತಮ್ಮದಾಗಿಸಿಕೊಂಡರು.
ಟೂರ್ನಿಯಲ್ಲಿ ಒಟ್ಟು 18 ಸಿಕ್ಸರ್ ಗಳನ್ನು ಸಿಡಿಸಿರುವ ಕೌರ್, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ. ಉತ್ತಮ ಬ್ಯಾಟಿಂಗ್ ಸರಾಸರಿಯಲ್ಲೂ ಅಗ್ರ ಸ್ಥಾನ ಗಳಿಸಿದ್ದಾರೆ.
ಭಾರತದ ಸ್ಮೃತಿ ಮಂದಾನ (377) ಹಾಗೂ ಜೆಮಿಮ್ಹಾ ರೋಡ್ರಿಗಸ್ (317) ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ಆಟಗಾರ್ತಿಯರು.



