ಜಿಲ್ಲಾ ಸುದ್ದಿದಾವಣಗೆರೆ

ದಾವಣಗೆರೆಯಲ್ಲಿ ನಿಲ್ಲದ ಮಳೆ ಆರ್ಭಟ: ಕೋಡಿ ಬಿದ್ದ ಕೆರೆಗಳು.. ಹೇಗಿದೆ ಗೊತ್ತಾ ರಮಣೀಯ ದೃಶ್ಯ…!

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನಂತೂ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಾವಿನಹೊಳೆ ಕೆರೆಗೆ ಕೋಡಿ ಬಿದ್ದಿದ್ದು, ರಮಣೀಯ ದೃಶ್ಯ ಕಂಡು ಬರುತ್ತಿದೆ. ಇದನ್ನು ನೋಡಲು ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ‌. ಅಪಾಯಮಟ್ಟದಲ್ಲಿ ಹಳ್ಳಕೊಳ್ಳ ಹರಿಯುತ್ತಿದ್ದು, ಜನರು ಹತ್ತಿರ ಹೋಗದಂತೆ ಸ್ಥಳೀಯರು ಸೂಚನೆ ಕೊಡುತ್ತಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಮಳೆ ಆರ್ಭಟಿಸುತ್ತಿದ್ದು, ಜನರು ಕಂಗಾಲಾಗಿದ್ದಾರೆ‌. ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಮಾವಿನಹೊಳೆ ಕೆರೆ ಕೋಡಿ ಬಿದ್ದಿದ್ದು, ಯಥೇಚ್ಛವಾಗಿ ನೀರು ಹರಿದು ಹೋಗುತ್ತಿದೆ. ಈ ಹಳ್ಳಕೊಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆ ಬೆಳೆದಿರುವ ರೈತರು ಆತಂಕಕ್ಕೊಳಗಾಗಿದ್ದಾರೆ.

ಕಳೆದ ರಾತ್ರಿ ಮತ್ತು ಇಂದು ಬೆಳಿಗ್ಗೆಯೂ ವರುಣನ ಆರ್ಭಟ ಜೋರಾಗಿದೆ. ಭತ್ತ ಹಾಗೂ ಮೆಕ್ಕೆಜೋಳ ಹಾಳಾಗಿ ನಷ್ಟ ಅನುಭವಿಸುವಂತಾಗಿರುವ ರೈತರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಕೊರೊನಾ ಹೊಡೆತಕ್ಕೆ ಸಿಲುಕಿ ಎರಡು ವರ್ಷಗಳಿಂದಲೂ ಆದಾಯ ಕಾಣದ ಅನ್ನದಾತರು ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದಾರೆ. ಇನ್ನು ಶಾಲಾ ಕಾಲೇಜುಗಳು ಆರಂಭವಾಗಿದ್ದು, ಮಕ್ಕಳ ಶುಲ್ಕ, ಬಟ್ಟೆ, ಪಠ್ಯಪುಸ್ತಕ ಸೇರಿದಂತೆ ಇತರೆ ವಸ್ತುಗಳ ಖರೀದಿಗೆ ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಅಕಾಲಿಕ ಮಳೆಯಿಂದಾಗಿ ಹರಿಹರ ತಾಲೂಕಿನ ಮಲೇಬೆನ್ನೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿಯೇ ಬರೋಬ್ಬರಿ ಎರಡು ಸಾವಿರಕ್ಕೂ ಅಧಿಕ ಎಕರೆಯಲ್ಲಿ ಫಸಲಿಗೆ ಬಂದಿದ್ದ ಭತ್ತ ನೆಲಕಚ್ಚಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಭಾಸ್ಕರ ರಾವ್ ಕ್ಯಾಂಪ್, ನಿಟ್ಟೂರು, ಕುಂಬಳೂರು, ಆದಾಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಬೆಳೆದಿದ್ದ ಭತ್ತ ಉತ್ತಮವಾಗಿಯೇ ಬಂದಿತ್ತು. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕವಾಗಿ ಸುರಿದ ಮಳೆ ತಣ್ಣೀರೆರಚಿದೆ. ಇಡೀ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ಜಗಳೂರು ತಾಲೂಕಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವೂ ಹಾಳಾಗಿ ಹೋಗಿದೆ.

ಕುಂಬಳೂರಿನಲ್ಲಿ ರೈತ ಕೋಣನತಂಬಗಿ ಕರಿಯಪ್ಪ ಅವರು ಹತ್ತು ಎಕರೆಯಲ್ಲಿ ಲ್ಯಾವಣಿ ಅಂದರೆ ಗುತ್ತಿಗೆ ಆಧಾರದಲ್ಲಿ ಪಡೆದು ಭತ್ತ ಬೆಳೆದಿದ್ದರು. ಅಕಾಲಿಕ ಮಳೆ ಸುರಿದ ಕಾರಣ ಸಂಪೂರ್ಣವಾಗಿ ಬೆಳೆ ನೆಲಕಚ್ಚಿದೆ. ನಾಗೋಳ್ ಧನಂಜಯ್ ಅವರು 11 ಎಕರೆ, ಕೆ. ಆಂಜನೇಗ ಅವರು 10 ಎಕರೆ, ಲೋಕಾಪುರದ ಆಂಜನೇಯ 10 ಎಕರೆ, ವಿನಾಯಕನಗರ ಕ್ಯಾಂಪಿನ ಹಲಗೇರಿ ಕರಿಬಸಪ್ಪ ಏಳು ಎಕರೆಯಲ್ಲಿ ಬೆಳೆದಿದ್ದ ಭತ್ತವೂ ಹಾಳಾಗಿದೆ.

ಹರಿಹರ ಶಾಸಕ ರಾಮಪ್ಪ ಒತ್ತಾಯ:

ಮಳೆಯಿಂದ ತಾಲೂಕಿನಲ್ಲಿ ಆಗಿರುವ ಕುರಿತಂತೆ ಆದಷ್ಟು ಬೇಗ ವರದಿ ತರಿಸಿಕೊಂಡು ಜಿಲ್ಲಾಡಳಿತ ರೈತರಿಗೆ ಪರಿಹಾರ ನೀಡಬೇಕೆಂದು ಹರಿಹರ ಶಾಸಕ ಎಸ್. ರಾಮಪ್ಪ ಒತ್ತಾಯಿಸಿದ್ದಾರೆ.

ಬನ್ನಿಕೋಡು, ಕೆ. ಬೇವಿನಹಳ್ಳಿ, ಕಡ್ಲೆಗೊಂದಿ, ದೇವರಬೆಳಕೆರೆ, ಕುಂಬಳೂರು, ಜಿಗಳಿ, ಹರಳಹಳ್ಳಿ, ಲಕ್ಕಶೆಟ್ಟಿಹಳ್ಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಕಟಾವಿಗೆ ಬಂದಿರುವ ಭತ್ತದ ಗದ್ದೆಗಳಲ್ಲಿ ನಿಂತಿರುವ ನೀರಿನಲ್ಲಿ ಭತ್ತದ ಗೊನೆ ಮುಳುಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ‌. ರೈತರು ತುಂಬಾ ನಷ್ಟ ಅನುಭವಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿದರು.

ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ 135 ಎಕರೆ ಭತ್ತ, 2 ಎಕರೆ ಬಾಳೆ ಮತ್ತು 10 ಎಕರೆ ಮೆಕ್ಕೆಜೋಳದ ಬೆಳೆ ಹಾನಿಯಾಗಿದ್ದು ರೂ.6.50 ಲಕ್ಷ, ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 787 ಎಕರೆ ಭತ್ತ, 2 ಎಕರೆ ರಾಗಿ ಬೆಳೆ ಹಾನಿಯಾಗಿದ್ದು, ರೂ. 48.33 ಲಕ್ಷ. ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಿಂದ ರೂ. 3 ಲಕ್ಷ ಮತ್ತು 2 ಪಕ್ಕಾ ಮನೆ ಭಾಗಶಃ ಹಾನಿಯಿಂದ ರೂ. 1.30 ಲಕ್ಷ ಸೇರಿ ಒಟ್ಟು ರೂ.4.30 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದ್ದಾರೆ.

ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.1 ಲಕ್ಷ ಮತ್ತು 6 ಪಕ್ಕಾ ಮನೆ ಭಾಗಶಃ ಹಾನಿಯಗಿದ್ದು, ರೂ.3 ಲಕ್ಷ, 7 ಎಕರೆ ಭತ್ತದ ಬೆಳೆ ಹಾನಿ ಆಗಿದ್ದು, ರೂ.3 ಲಕ್ಷ ಸೇರಿ ಒಟ್ಟು ರೂ.7.15 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು, ರೂ.3 ಲಕ್ಷ, 2 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ರೂ.1.20 ಲಕ್ಷ ಮತ್ತು 2 ಕಚ್ಚಾ ಮನೆ ತೀವ್ರ ಹಾನಿಯಾಗಿದ್ದು ರೂ.3.00 ಲಕ್ಷ, ಒಟ್ಟು 7.20 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಗುರುವಾರ ಹಾಗೂ ಇಂದು‌ ಸುರಿದ ಮಳೆಯಿಂದ ಮತ್ತಷ್ಟು ಹಾನಿಯಾಗಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಡಿಸಿ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button