ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯಲ್ಲಿ ಧಗಧಗನೆ ಹೊತ್ತಿ ಉರಿದ ಹೋಟೆಲ್

ದೇವನಹಳ್ಳಿ: ಆಕಸ್ಮಿಕ ಬೆಂಕಿಯಿಂದ ಹೋಟೆಲ್ ವೊಂದು ಧಗಧಗನೆ ಹೊತ್ತಿ ಉರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ಹೆದ್ದಾರಿ ಬದಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 70ರ ಬಳಿ ಇರುವ ಹೋಟೆಲ್ನಲ್ಲಿ ಗುರುವಾರ ಬೆಳಗ್ಗೆ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಹೋಟೆಲ್ ಸುಟ್ಟು ಭಸ್ಮವಾಗಿದೆ. ಜನ ನೋಡ ನೋಡುತ್ತಿದ್ದಂತೆ ಇಡೀ ಹೋಟೆಲ್ ಧಗಧಗನೆ ಹೊತ್ತಿ ಉರಿಯತೊಡಗಿತು. ಮುಗಿಲೆತ್ತರಕ್ಕೆ ದಟ್ಟವಾಗಿ ಹೊಗೆ ಆವರಿಸಿ ಸ್ಥಳೀಯರು ಕೆಲಕಾಲ ಭಯಭೀತರಾದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ತೀವ್ರವಾಗಿ ಶ್ರಮಿಸಿದರು.
ಹೋಟೆಲ್ ಸಿಬ್ಬಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡ ಸಂಭವಿಸುವ ವೇಳೆ ಗ್ರಾಹಕರು ಇರದಿದ್ದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.




