Latestಮೆಟ್ರೋರಾಜ್ಯಸುದ್ದಿ

ಶಬ್ದಮಾಲಿನ್ಯ ಹೆಚ್ಚಿಸುವ ವಾಹನಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಶಬ್ದಮಾಲಿನ್ಯ ಹೆಚ್ಚಿಸುತ್ತಿರುವ ವಿವಿಧ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ವಾಹನಗಳಲ್ಲಿ ಮಾರ್ಪಡಿಸಿದ ಸೈಲೆನ್ಸರ್, ಹಾರ್ನ್ ಗಳಿಂದ ಶಬ್ದಮಾಲಿನ್ಯ ಸೃಷ್ಟಿಯಾಗುತ್ತಿದೆ. ಇದರ ನಿಯಂತ್ರಣ ಕಾಯ್ದೆಯನ್ನು ಸಮಪರ್ಕವಾಗಿ ಜಾರಿಗೊಳಿಸುವಂತೆ ಗಿರೀಶ್ ಭಾರದ್ವಾಜ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ನಗರದ ಕೆಲವೆಡೆ ಮಸೀದಿಗಳಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನೂ ಸಹ ಮುಖ್ಯನ್ಯಾಯಮೂರ್ತಿ ರಿತುರಾಜ್ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

ಶಬ್ದಮಾಲಿನ್ಯದಿಂದ ವಿವಿಧ ಅನಾರೋಗ್ಯಗಳಿಗೆ ಜನ ಒಳಗಾಗುತ್ತಿದ್ದಾರೆ. ಕಿವುಡುತನ, ನಿದ್ರಾಹೀನತೆ, ಒತ್ತಡವಷ್ಟೇ ಅಲ್ಲದೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ, ಸಂಬಂಧಿಸಿದ ಪ್ರಾಧಿಕಾರಗಳು ಸೂಕ್ತ ಕ್ರಮ ಜರುಗಿಸುತ್ತಿಲ್ಲ. ಮಸೀದಿಗಳಲ್ಲಿ ತಗ್ಗಿದ ಧ್ವನಿಯ ಧ್ವನಿವರ್ಧಕಗಳನ್ನು ಬಳಸುವಂತೆ ತನಗೆ ಅಧಿಕಾರವಿಲ್ಲದಿದ್ದರೂ ವಕ್ಫ್ ಮಂಡಳಿ ಸುತ್ತೋಲೆ ಹೊರಡಿಸಿದೆ. ಶಬ್ದಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಹಬ್ಬಗಳು, ವಾರ್ಷಿಕವಾಗಿ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ 15 ದಿನಗಳಿಗಿಂತ ಹೆಚ್ಚು ಸಮಯ ಧ್ವನಿವರ್ಧಕದ ಬಳಕೆಗೆ ಅವಕಾಶವಿಲ್ಲ. ಆದರೆ ರಾಜ್ಯದಲ್ಲಿ ಇಂತಹ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಲಾಗುತ್ತಿದೆ ಎಂದು ಅರ್ಜಿದಾರ ಪರ ವಕೀಲ ಶ್ರೀಧರ್ ಪ್ರಭು ಮಂಡಿಸಿದರು.

ಇದನ್ನು ಆಲಿಸಿದ ಪೀಠ , ಕೆಲ ತಾಂತ್ರಿಕ ಕಾರಣಗಳಿಂದ ವಾಹನಗಳ ಶಬ್ದಮಾಲಿನ್ಯ ಹೆಚ್ಚಾಗುತ್ತಿದೆ. ಮಾರ್ಪಡಿಸಿದ ಸೈಲೆನ್ಸರ್, ಹಾರ್ನ್ ಶಬ್ದ ಹೆಚ್ಚಾಗತೊಡಗಿದೆ. ಪರಿಸ್ಥಿತಿ ಬಿಗಡಾಯಿಸಿರುವುದು ನೋಡಿದರೆ ಯಾವುದೇ ಕ್ರಮ ಕೈಗೊಂಡಿರುವುದು ತಿಳಿಯುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ವಾಹನಗಳ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಪ್ರಾಧಿಕಾರಗಳು ಕಠಿಣ ಕ್ರಮ ಜರುಗಿಸಬೇಕು. ಈ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.

ವಕ್ಫ್ ಬೋರ್ಡ್ ಸೂಚನೆಯಂತೆ ಧ್ವನಿವರ್ಧಕ ಬಳಸುತ್ತಿರುವುದಾಗಿ ಮಸೀದಿಗಳು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿವೆ. ಆದರೆ ವಕ್ಫ್ ಬೋರ್ಡ್ ಯಾವ ಕಾನೂನಿನಡಿ ಇಂತಹ ಸುತ್ತೋಲೆ ಹೊರಡಿಸಿದೆ ಎಂದು ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಲಾಯಿತು.

Spread the love

Related Articles

Leave a Reply

Your email address will not be published. Required fields are marked *

Back to top button