ಕಾರವಾರ : ನಿರ್ವಹಣೆ ಇಲ್ಲದೆ ಸೊರಗುತ್ತಿದೆ INS ಚಾಪೆಲ್ ಯುದ್ಧನೌಕೆ

ಕಾರವಾರ : ಐಎನ್ಎಸ್ ಚಾಪೆಲ್ ಮ್ಯೂಸಿಯಂನಲ್ಲಿರುವ ಯುದ್ಧನೌಕೆ ಇದು ಭಾರತೀಯ ನೌಕಾಪಡೆಯ ಯುದ್ದಗಳಲ್ಲಿ ಸಕ್ರೀಯವಾಗಿದ್ದ ಯುದ್ದ ನೌಕೆ. ಮಾತ್ರವಲ್ಲ, ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿದ್ದು, ಸೇನೆಗೆ ತನ್ನದೇ ರೀತಿಯ ಸೇವೆ ಸಲ್ಲಿಸಿದೆ. 2005 ರಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದು, ಕಾರವಾರದಲ್ಲಿ ಮ್ಯೂಸಿಯಂ ಆಗಿ ಮಾರ್ಪಡಿಸಲಾಗಿದೆ.
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಐಎನ್ಎಸ್ ಚಾಪೆಲ್ ಸ್ಥಾಪನೆಗೊಂಡು ಇಂದಿಗೆ (ನ.14) 15 ವಸಂತಗಳನ್ನು ಪೂರೈಸುತ್ತಿದೆ. ದುರದೃಷ್ಟವಶಾತ್, ನಿವೃತ್ತಿ ಬಳಿಕವೂ ಲಕ್ಷಾಂತರ ರೂ. ಆದಾಯ ತರುತ್ತಿದ್ದ ನೌಕೆಯು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುವಂತಾಗಿದೆ.
ಭಾರತೀಯ ನೌಕಾಪಡೆಯಲ್ಲಿ 29 ವರ್ಷಗಳ ಸುದೀರ್ಘ ಸೇವೆಯ ಬಳಿಕ 2005 ರ ಮೇ ತಿಂಗಳಲ್ಲಿ ಐಎನ್ಎಸ್ ಚಾಪೆಲ್ (ವಿಮಾನ ವಾಹಕ ಯುದ್ಧ ನೌಕೆ) ನಿವೃತ್ತಿಯಾಗಿದೆ. ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೊಂದಿರುವ ರಷ್ಯಾ ನಿರ್ಮಿತ ನೌಕೆಯನ್ನು 1976 ರ ನ. 4 ರಂದು ಭಾರತೀಯ ನೌಕಾಪಡೆಯ ಸೇವೆಗೆ ಸೇರ್ಪಡೆಗೊಳಿಸಲಾಗಿತ್ತು.
1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ಮಾಡಲು ಮತ್ತು ಅರಬ್ಬಿ ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಚಾಪೆಲ್ ಬಹುಮುಖ್ಯ ಪಾತ್ರವಹಿಸಿತ್ತು. ಇದು ಪಾಕಿಸ್ತಾನದ ವಾಣಿಜ್ಯ ರಾಜಧಾನಿಯನ್ನು ದುರ್ಬಲಗೊಳಿಸಿ, ಭಾರತದ ಅಂತಿಮ ವಿಜಯದಲ್ಲಿ ನೆರವಾಗಿತ್ತು.ಈ ಚಾಪೆಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಸಿಬ್ಬಂದಿ ಪರಮವೀರ ಚಕ್ರ ಮತ್ತು 8 ವೀರ ಚಕ್ರ ಗಳನ್ನು ಪಡೆದಿರುವುದು ಈಗ ಇತಿಹಾಸವಾಗಿದೆ.
29 ವರ್ಷಗಳ ಸಾರ್ಥಕ ದೇಶ ಸೇವೆಯ ಬಳಿಕ 2005 ರ ಮೇ 5 ರಂದು ಇದನ್ನು ನಿವೃತ್ತಿಗೊಳಿಸಲಾಯಿತು. ನಂತರ ಒಂದು ವರ್ಷದ ಬಳಿಕ ಕಾರವಾರದ ಟ್ಯಾಗೋರ್ ಕಡಲ ತೀರದಲ್ಲಿ ಮ್ಯೂಸಿಯಂ ಆಗಿ ಸ್ಥಾಪಿಸಲಾಗಿದೆ. ಸುಮಾರು 245 ಟನ್ ತೂಕ,38.6 ಮೀಟರ್ ಉದ್ದ ಹಾಗೂ 7.6 ಮೀ.ಅಗಲ ಇರುವ ನೌಕೆ,ಗರಿಷ್ಠ ಗಂಟೆಗೆ 37 ನಾಟಿಕಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ನೌಕೆಯಲ್ಲಿ ಎರಡು 30 ಎಂಎಂ ಗನ್‌ಗಳು,ಒಂದು ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ಉಡಾವಣೆ,4 ಹಡಗು ವಿರೋಧಿ ಕ್ಷಿಪಣಿ ಲಾಂಚರ್‌ಗಳಿವೆ.ಪ್ರತಿ ದಿನ ನೂರಾರು ಪ್ರವಾಸಿಗರು ಇದರ ವೀಕ್ಷಣೆಗೆಂದೇ ಕಾರವಾರಕ್ಕೆ ಭೇಟಿ ನೀಡುತ್ತಿದ್ದಾರೆ.
ನೌಕೆಯ ಒಳಭಾಗದಲ್ಲಿರುವ ಬ್ಯಾರಕ್‌ಗಳು, ಎಂಜಿನ್ ಕೊಠಡಿಗಳು,ಬಾಹ್ಯ ಬಂದೂಕುಗಳು ಸಮುದ್ರದ ಸನಿಹವೇ ಇರುವ ಕಾರಣ ತುಕ್ಕು ಹಿಡಿಯುತ್ತಿವೆ. ವಿಚಿತ್ರ ಅಂದರೆ ಮಳೆಗಾಲದಲ್ಲಿ ನೌಕೆಗೆ ತಾಡಪತ್ರಿ ಹೊದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಆವರಣದಲ್ಲಿ ಕುರುಚಲು ಗಿಡಗಳು ಬೆಳೆದು ಸೌಂದರ್ಯ ಕುಂದುತ್ತಿದೆ. ಇರುವ ಇಬ್ಬರು ಕ್ಯೂರೇಟರ್‌ಗಳಿಗೆ ವೇತನ ಪಾವತಿಸದೇ ವರ್ಷಗಳೇ ಸಂದಿವೆ.
ಪ್ರವಾಸಿಗರ ನೆಚ್ಚಿನ ಚಾಪೆಲ್ ಯುದ್ದ ನೌಕೆಯನ್ನು ಇನ್ನಾದರೂ ಸೂಕ್ತ ನಿರ್ವಹಣೆ ಮಾಡುವ ಮೂಲಕ ಉಳಿಸಿಕೊಳ್ಳುವ ಕೆಲಸವನ್ನು ಸ್ಥಳೀಯ ಆಡಳಿತ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



