Breaking NewsLatestರಾಜಕೀಯರಾಷ್ಟ್ರೀಯ

ಟಿಎಂಸಿ ಗೋವಾ ಉಸ್ತುವಾರಿಯಾಗಿ ಸಂಸದೆ ಮಹುವಾ ಮೊಯಿತ್ರಾ

ನವದೆಹಲಿ: ತೃಣಮೂಲ ಕಾಂಗ್ರೆಸ್, ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪಕ್ಷದ ಗೋವಾ ಉಸ್ತುವಾರಿಯಾಗಿ ನೇಮಿಸಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಟಿಎಂಸಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ.

ಟಿಎಂಸಿ, ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ವಿಸ್ತರಿಸುವ ಉದ್ದೇಶದ ಭಾಗವಾಗಿ ಗೋವಾದಲ್ಲಿ ಚುನಾವಣಾ ಕಣಕ್ಕೆ ಸ್ವಯಂಬಲದಿಂದ ಧುಮುಕಿದ್ದು, ಇದೇ ವೇಳೆ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಗೋವಾ ಉಸ್ತುವಾರಿಯಾಗಿ ನೇಮಿಸಿರುವುದು ಪಕ್ಷಕ್ಕೆ ಹೊಸ ಬಲವನ್ನು ಕೊಡಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಅವಕಾಶಕ್ಕಾಗಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ತಿಳಿಸಿರುವ ಮೊಯಿತ್ರಾ, ಅತ್ಯುತ್ತಮ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಟ್ವೀಟ್ ಮೂಲಕ ಹೇಳಿದ್ದಾರೆ.

ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ತಮ್ಮ ನೇರ ಮತ್ತು ನಿಷ್ಠುರ ಚೊಚ್ಚಲ ಭಾಷಣದಿಂದ ಗಮನ ಸೆಳೆದವರು ಮತ್ತು ಪ್ರಶಂಸೆಗೆ ಪಾತ್ರರಾದವರು. ಆ ಭಾಷಣದಲ್ಲಿ ಅವರು, ಭಾರತವು ಫ್ಯಾಸಿಸಂ ಕಡೆಗೆ ಚಲಿಸುತ್ತಿದೆ ಎಂಬುದನ್ನು ಪ್ರಚಲಿತ ಸನ್ನಿವೆಶಗಳು ಸೂಚಿಸುತ್ತವೆ ಎಂದು ಎಚ್ಚರಿಸಿದ್ದರು. ಅದೇ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮೊಯಿತ್ರಾ, ನೀವು ಕಣ್ಣು ತೆರೆದರೆ ಮಾತ್ರ, ಈ ದೇಶವು ಛಿದ್ರವಾಗುತ್ತಿರುವ ಚಿಹ್ನೆಗಳು ಎಲ್ಲೆಡೆ ಕಂಡುಬರುವುದನ್ನು ಕಾಣುವಿರಿ ಎಂದಿದ್ದರು.

ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ JP ಮೋರ್ಗಾನ್‌ನ ಮಾಜಿ ಉದ್ಯೋಗಿ ಮೊಯಿತ್ರಾ, 2009ರಲ್ಲಿ ಲಂಡನ್‌ನಲ್ಲಿ ಭಾರತೀಯ ರಾಜಕೀಯ ರಂಗಕ್ಕೆ ಪ್ರವೇಶಿಸಲು ಉದ್ಯೋಗ ತ್ಯಜಿಸಿದರು. ಅಮೆರಿಕಾದ ಮೆಸಾಚುಸೆಟ್ಸ್‌ನ ಮೌಂಟ್ ಹೋಲಿಯೋಕ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವರು, ಅಲ್ಲಿ ಗಣಿತ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದವರು.

46 ವರ್ಷದ ಮೊಯಿತ್ರಾ, ತಮ್ಮ ರಾಜಕೀಯ ಜೀವನವನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್‌ನಲ್ಲಿ ಪ್ರಾರಂಭಿಸಿದರು. ಬಳಿಕ ಅವರು 2010ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸೇರಿದರು. ಹಲವಾರು ವರ್ಷಗಳಿಂದ ಟಿಎಂಸಿಯ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ ನಂತರ, ಮೊಯಿತ್ರಾ ದೂರದರ್ಶನ ಚರ್ಚೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮೊಯಿತ್ರಾ, ಬಿಜೆಪಿಯ ಕಲ್ಯಾಣ್ ಚೌಬೆ ವಿರುದ್ಧ 60,000 ಮತಗಳ ಅಂತರದಿಂದ ಗೆದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button