ಕಟ್ಟಡ ಭಾಗ್ಯವಿಲ್ಲದ ಪಶುವೈದ್ಯ ಅಸ್ಪತ್ರೆಯಲ್ಲಿ ನಡೆಯುತ್ತಿದೆ ಕುಂದಾಣದ ನಾಡ ಕಛೇರಿ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ನಾಡ ಕಚೇರಿ ಸ್ವಂತ ಕಟ್ಟಡವಿಲ್ಲದೆ ಪಶುವೈದ್ಯ ಆಸ್ಪತ್ರೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಇದರಿಂದಾಗಿ ಇಲ್ಲಿನ ಪಶುವೈದ್ಯ ಆಸ್ಪತ್ರೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತಾಗಿದೆ.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ತಾಲ್ಲೂಕು ಕಚೇರಿಗೆ ಅಲೆದಾಡಬಾರದು. ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹೋಬಳಿಗೊಂದು ನಾಡ ಕಚೇರಿ ತೆರೆದಿದ್ದರೂ ಕುಂದಾಣದಲ್ಲಿ ನಾಡ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ಪಶುವೈದ್ಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವಂತಾಗಿ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿಗಳು ಕೂಡ ಕೆಲಸ ಮಾಡಲು ಕಿರಿಕಿರಿ ಅನುಭವಿಸುವಂತಾಗಿದೆ.
ಕುಂದಾಣ ಹೋಬಳಿಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಹಣ ಸಂದಾಯವಾಗುತ್ತಿದ್ದರು ನಾಡ ಕಚೇರಿಗೊಂದು ಸ್ವಂತ ಕಟ್ಟಡ ಇಲ್ಲದಿರುವುದು ಇಲ್ಲಿನ ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣವೆಂದು ಈ ಭಾಗದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾಣ ಹೋಬಳಿ ವ್ಯಾಪ್ತಿಯಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಇದೆ ಇಲ್ಲಿ ಹಲವಾರು ಕಂಪನಿಗಳು, ಕಲ್ಲು ಗಣಿಗಾರಿಕೆ ನಡೆಸುತ್ತಿದೆ ಮತ್ತು ಸಿ.ಎಸ್.ಆರ್. ನಿಧಿಯಿಂದ ಕೂಡ ಅನುದಾನ ಸಂಗ್ರಹವಾಗುತ್ತಿದೆ. ಆದರೆ ಈ ಅನುದಾನವನ್ನೇ ಬಳಕೆ ಮಾಡಿಕೊಂಡು ನಾಡ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಇಲ್ಲಿನ ಜನಪ್ರತಿನಿಧಿಗಳ ಜನಪರ ಕಾಳಜಿಯನ್ನು ಪ್ರಶ್ನಿಸುವಂತಾಗಿದೆ.
ಕುಂದಾಣ ಸರ್ವೇ ನಂ. 300ರಲ್ಲಿರುವ ಗ್ರಾಮ ಠಾಣಾ ಸಂಖ್ಯೆ 278 ರಲ್ಲಿ 55×55 ಅಡಿ ಜಾಗದಲ್ಲಿ ನಾಡ ಕಚೇರಿಯ ಕಲ್ಲಿನ ಹಳೆಯ ಕಟ್ಟಡವಿದೆ. ಆದರೆ, ಈ ಕಟ್ಟಡ ಸಂಪೂರ್ಣವಾಗಿ ಈಗಲೋ ಆಗಲೋ ಬೀಳುವಂತೆ ಶಿಥಿಲವಾಗಿದ್ದು, ಯಾವುದೇ ಸಮಯದಲ್ಲಿ ಉರುಳಿ ಬೀಳುವ ಸ್ಥಿತಿಯಲ್ಲಿದೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ದಟ್ಟವಾಗಿ ಬೆಳೆದು ಕಟ್ಟಡ ಪಾಳು ಬಿದ್ದಿದೆ.
ಸರ್ಕಾರದ ಇ-ಆಡಳಿತ ಕಾರ್ಯಕ್ರಮದ ಪ್ರಕಾರ ನಾಡ ಕಚೇರಿ ಪ್ರಾರಂಭಿಸಲಾಗಿದ್ದು. ಇದು ವಿವಿಧ ಸಮುದಾಯಗಳು ಸರ್ಕಾರದಿಂದ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ. ಆದರೆ, ಇಲ್ಲಿನ ನಾಡ ಕಚೇರಿಗೆ ಸ್ವಂತ ಕಟ್ಟಡವೇ ಇಲ್ಲದೆ, ಸಾಕಷ್ಟು ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಡ ಕಚೇರಿ ವ್ಯಾಪ್ತಿಯಲ್ಲಿ ಉಪ ತಹಶೀಲ್ದಾರ್, ರಾಜಸ್ವ ನಿರೀಕ್ಷಕ, ನಾಲ್ವರು ಗ್ರಾಮ ಲೆಕ್ಕಾಧಿಕಾರಿಗಳು, ಕಂಪ್ಯೂಟರ್ ಆಪರೇಟರ್ ಹೊರತುಪಡಿಸಿ ಬೇರೆ ಸಿಬ್ಬಂದಿಯಿಲ್ಲ. 8 ಕಂದಾಯ ಪಂಚಾಯಿತಿಗಳು ಇವೆ. ಎರಡು ಪಂಚಾಯಿತಿಗಳಿಗೆ ಒಬ್ಬೊಬ್ಬ ಗ್ರಾಮ ಲೆಕ್ಕಾಧಿಕಾರಿ ಇದ್ದಾರೆ. ಸರ್ಕಾರ ಕೂಡ ಅನೇಕ ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳದೇ ಇರುವುದು ಸಿಬ್ಬಂದಿ ಕೊರತೆಗೆ ಕಾರಣವಾಗಿದೆ.
ಪಶುವೈದ್ಯ ಆಸ್ಪತ್ರೆ ಕಟ್ಟಡದ ಶೇಕಡಾ 80 ರಷ್ಟು ಭಾಗವನ್ನು ಕುಂದಾಣದ ನಾಡ ಕಛೇರಿ ಆಕ್ರಮಿಸಿಕೊಂಡಿದ್ದು ಈ ಪಶುವೈದ್ಯ ಆಸ್ಪತ್ರೆಯ ವ್ಯಾಪ್ತಿಯಲ್ಲಿ 1600 ಹಸುಗಳು, 56 ಎಮ್ಮೆಗಳು, 662 ಕುರಿಗಳು, 740 ಮೇಕೆಗಳು, 65 ಹಂದಿಗಳು 210 ನಾಯಿಗಳು ಮತ್ತು 2087, ಕೋಳಿಗಳು ಇದ್ದು ಇವುಗಳ ಚಿಕಿತ್ಸೆಗಾಗಿ ರೈತರು ಪಶುವೈದ್ಯ ಆಸ್ಪತ್ರೆಗೆ ಕರೆ ತಂದಾಗ ಅವುಗಳಿಗೆ ಚಿಕಿತ್ಸೆ ನೀಡಲು ತುಂಬಾ ತೊಂದರೆ ಉಂಟಾಗಿದೆ ಆಸ್ಪತ್ರೆ ಪಕ್ಕದ ಖಾಸಗಿಯವರ ಜಾಗದಲ್ಲಿ ಚಿಕಿತ್ಸೆ ಕೊಡುವಂತ ಸ್ಥಿತಿ ಉಂಟಾಗಿದೆ.
ಕುಂದಾಣದ ನಾಡ ಕಚೇರಿಯನ್ನು ಪಶುವೈದ್ಯ ಆಸ್ಪತ್ರೆ ಕಟ್ಟಡದಿಂದ ತೆರವುಗೊಳಿಸಿ ನಾಡ ಕಚೇರಿಗೆ ನೂತನ ಕಟ್ಟಡ ನಿರ್ಮಾಣ ಮಾಡಿ ಎಲ್ಲರಿಗೂ ಅನುಕೂಲವಾಗುವಂತೆ ಮಾಡಬೇಕು ಇದರಿಂದ ಪಶುವೈದ್ಯ ಆಸ್ಪತ್ರೆಯು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನವೀನ್ ಸೂಲಕುಂಟೆ.
ಹೊಸ ಕಟ್ಟಡಕ್ಕಾಗಿ ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಕೊಟ್ಟಿದ್ದೇವೆ ಈ ಬಗ್ಗೆ ಅವರು ಪರಿಶೀಲಿಸಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಭರವಸೆ ಇದೆ. ಕೋವಿಡ್ ಕಾರಣದಿಂದ ಅನುದಾನದ ಕೊರತೆಯಿಂದ ತಡವಾಗಿರಬಹುದು ಎನ್ನುತ್ತಾರೆ ಉಪ ತಹಶಿಲ್ದಾರ್ ಬಿಎ ಚೈತ್ರ.
ಪಶುವೈದ್ಯ ಆಸ್ಪತ್ರೆ ಕಟ್ಟಡದಲ್ಲಿ ನಾಡ ಕಚೇರಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಮಳೆ ಮತ್ತು ಬಿಸಿಲಿನಲ್ಲಿ ಆಸ್ಪತ್ರೆಯ ಹಿಂಭಾಗದ ಖಾಸಗಿಯವರ ಸ್ಪಲ್ಪ ಜಾಗದಲ್ಲಿ ಜಾನುವಾರುಗಳನ್ನು ನಿಲ್ಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದೇವೆ ಆದಷ್ಟು ಬೇಗ ನಾಡ ಕಚೇರಿ ಬೇರೆ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ನಮಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಕುಂದಾಣ ಮುಖ್ಯ ಪಶುವೈದ್ಯಾಧಿಕಾರಿ ಡಾ. ವಿ. ಶ್ರೀನಿವಾಸ್ .




