ಕೋವಿಡ್ ಇಳಿಕೆ: ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ: ಅಶ್ವಿನಿ ಆಸ್ಪತ್ರೆಯಿಂದ ಚಿಕಿತ್ಸಾ ವಿಭಾಗಗಳ ಸ್ಥಳಾಂತರ

ಕೊಡಗು : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿನ್ನೆಲೆ ಅಶ್ವಿನಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ವೈದ್ಯಕೀಯ ಸೇವೆಗಳಾದ ವೈದ್ಯಶಾಸ್ತ್ರ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಶ್ವಾಸ ಕೋಶರೋಗ ವಿಭಾಗ, ಚರ್ಮರೋಗ ವಿಭಾಗ, ಮನೋಶಾಸ್ತ್ರ ವಿಭಾಗ, ರೇಡಿಯಾಲಜಿ ವಿಭಾಗವನ್ನು ಮರಳಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸೇವೆಯನ್ನು ಪಡೆಯಬಹುದೆಂದು ಜಿಲ್ಲಾಡಳಿತ ತಿಳಿಸಿದೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್ ರೋಗವನ್ನು ತಡೆಗಟ್ಟುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲಾಡಳಿತ 2020 ಏಪ್ರಿಲ್ ತಿಂಗಳಿನಲ್ಲಿ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಎಲ್ಲಾ ಕೋವಿಡೇತರ ಸೇವೆಯನ್ನು ಮಡಿಕೇರಿ ನಗರದಲ್ಲಿರುವ ಖಾಸಗಿ ಅಶ್ವಿನಿ ಆಸ್ಪತ್ರೆಗೆ ವರ್ಗಾಯಿಸಿ ಎಲ್ಲಾ ನಾನ್ ಕೋವಿಡ್ ವೈದ್ಯಕೀಯ ಸೇವೆಗಳನ್ನು ನೀಡುತ್ತಾ ಬರಲಾಗುತ್ತಿತ್ತು. ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ದರ ಕಡಿಮೆ ಆಗಿರುವುದರಿಂದ ನಾನ್ ಕೋವಿಡ್ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ನ.1 ರಿಂದ ಈ ಹಿಂದಿನಂತೆ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.




