ಉಕ್ಕಿ ಹತಿಯುತ್ತಿರುವ ಕಾಗಿಣಾ ನದಿ: ಮಳಖೇಡ್ ರಸ್ತೆ ಬಂದ್

ಕಲಬುರಗಿ: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ಕಾಗಿಣಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದ್ದು, ಸೇಡಂ ತಾಲ್ಲೂಕಿನ ಮಳಖೇಡ ಬಳಿಯ ಸೇತುವೆ ಜಲಾವೃತಗೊಂಡು ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಬೆಳಿಗ್ಗೆ 08 ಗಂಟೆಗೆ ಸೇತುವೆ ಜಲವೃತವಾಗಿದ್ದು, ಹಂತ ಹಂತವಾಗಿ ನೀರು ಏರಿಕೆ ಆಗುತ್ತಿದೆ. ಸೇತುವೆ ಮೇಲೆ ಸುಮಾರು 4 ಅಡಿ ನೀರು ಹರಿಯುತ್ತಿದೆ. ಕಲಬುರಗಿ- ಸೇಡಂ ಸಂಪರ್ಕ ಕಡಿತದಿಂದ ಭಾರಿ ವಾಹನ ಚಾಲಕರು ಬೆಳಿಗ್ಗೆ ಕಾದು ಕುಳಿತಿದ್ದಾರೆ. ಸೇತುವೆಯ ಎರಡು ಭಾಗದಲ್ಲಿ ಸುಮಾರು 1 ಕಿ. ಮೀಟರ್ ದೂರದ ವರೆಗೂ ವಾಹನಗಳು ಬೆಳಿಗ್ಗೆಯಿಂದ ನಿಂತಲ್ಲೆ ನಿಂತಿದ್ದು ವಾಹನ ಸವಾರರು ಪಡಬಾದ ಪಾಡು ಪಡಿತ್ತಿದ್ದಾರೆ.
ಚಿಂಚೋಳಿಯ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ಒಳ ಹರಿವು ಹೆಚ್ಚಾಗಿದ್ದರಿಂದ ಮುಲ್ಲಾಮಾರಿ ನದಿಗೆ ನಾಲ್ಕು ಗೇಟ್ಗಳ ಮುಖಾಂತರ 4500 ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದೆ ಇದರಿಂದ ಹಲವೆಡೆ ಸೇತುವೆಗಳು ಮುಳಗಡೆಯಾಗಿದ್ದು. ಕಾಗಿಣಾ ನದಿ ಪಾತ್ರದ ಜನರಲ್ಲೂ ಪ್ರವಾಹ ಆತಂಕ ಮನೆ ಮಾಡಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ ಮನೆಮಾಡಿದೆ. ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿ ನಲುಗಿದ ಜನರು ಮತ್ತೆ ಪ್ರವಾಹ ಎದುರಾದರೆ ಏನು ಮಾಡುವುದು ಎಂಬ ಚಿಂತೆಯಲ್ಲಿ ದಿನ ಕಳೆಯುತ್ತಿದ್ದಾರೆ.




