
ಯವತ್ಮಲ್: ಸರತಿ ಸಾಲಿನಲ್ಲಿ ನಿಲ್ಲದೆ ಮುಂದೆ ಹೋಗಿ ನಿಂತು ಕೋವಿಡ್ ಲಸಿಕೆ ಪಡೆಯಲು ಬಂದಾತನಿಗೆ ಲಸಿಕೆ ನೀಡಲು ನಿರಾಕರಿಸಿದ ವೈದ್ಯರು ಆತನಿಂದ ಹಲ್ಲೆಗೊಳಗಾದ ಘಟನೆ ಮಹಾರಾಷ್ಟ್ರದ ಯವತ್ಮಲ್ ಸಮೀಪದ ವಸಂತನಗರ ಎಂಬಲ್ಲಿ ನಡೆದಿದೆ. ಆರೋಪಿಯನ್ನು ದಿಗ್ರಾಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೋಹರ್ ರಾಥೋಡ್ (32) ಎಂಬ ಆರೋಪಿ ಲಸಿಕೆ ಪಡೆಯಲು ಸರತಿ ಸಾಲಿನಿಂದ ತಪ್ಪಿಸಿ ಬಂದು ತನಗೆ ಮೊದಲು ಲಸಿಕೆ ನೀಡಬೇಕೆಂದು ಕೇಳಿಕೊಂಡಿದ್ದಾನೆ. ವೈದ್ಯ ಡಾ.ಸಂತೋಷ್ ಇದಕ್ಕೆ ನಿರಾಕರಿಸಿ, ಮೊದಲು ನೋಂದಾಯಿಸಿಕೊಂಡು ಬರಲು ಹೇಳಿದ್ದಾರೆ.
ಇಷ್ಟಕ್ಕೇ ಸಿಟ್ಟಾದ ಆರೋಪಿ ರಾಥೋಡ್ ಕೊಡಲಿ ತಂದು ಡಾ.ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ವೈದ್ಯರು ಆತನ ಹಲ್ಲೆ ಮಾಡುತ್ತಿದ್ದಾಗ ಸರಿದು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.




