
ಬೆಂಗಳೂರು: ವಿಧಾನಮಂಡಳದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಲೋಕಸಭೆ ಸ್ಪೀಕರ್ ಓ ಬಿರ್ಲಾ ಇಂದು ಮಧ್ಯಾಹ್ನ 2-30ಕ್ಕೆ ʼಪ್ರಜಾಪ್ರಭುತ್ವ – ಸಂಸದೀಯ ಮೌಲ್ಯಗಳ ಸಂರಕ್ಷಣೆʼ ಕುರಿತಾಗಿ ಭಾಷಣ ಮಾಡಲಿರುವುದಾಗಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದು, ಇದನ್ನು ವಿಪಕ್ಷಗಳು ಬಹಿಷ್ಕರಿಸುವ ಸಾಧ್ಯತೆಯಿದೆ.
ವಿಧಾನ ಮಂಡಳದಲ್ಲಿ ಲೋಕಸಭೆಯ ಸ್ಪೀಕರ್ ಮಾತನಾಡುವುದು ತಪ್ಪಾಗುತ್ತದೆ. ಇಂತಹದ್ದೊಂದು ಹೊಸ ಸಂಪ್ರದಾಯ ಬೇಡ. ರಾಷ್ಟ್ರಪತಿ ಮತ್ತು ಕರ್ನಾಟಕದ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಮಾತನಾಡಿರುವ ನಿದರ್ಶನಗಳಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸಂವಿಧಾನದಲ್ಲಿ ಇಂಥ ಭಾಷಣಕ್ಕೆ ಅವಕಾಶವಿಲ್ಲ, ನಮ್ಮ ಸಂಸದೀಯ ವ್ಯವಸ್ಥೆ ಪ್ರಕಾರ ವಿಧಾನ ಮಂಡಲದ ಸದನದ ಒಳಗೆ ಲೋಕಸಭೆ ಸ್ಪೀಕರ್ ಮಾತನಾಡಲು ಅವಕಾಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.



