ಕೃಷಿಜಿಲ್ಲಾ ಸುದ್ದಿರಾಮನಗರವಿಶೇಷ

ರೇಷ್ಮೆ ಹುಳುಗಳಿಗೆ ಗಂಟುರೋಗ; ಬೆಳೆಗಾರರಲ್ಲಿ ಆತಂಕ

ರಾಜೇಶ್ ಕೊಂಡಾಪುರ

ರಾಮನಗರ: ಹಿಪ್ಪು ನೇರಳೆ ಬೆಳೆಗೆ ಬಾಸಿರುವ ನುಸಿ ಪೀಡೆ (ಟೆಟ್ರನೈಕಸ್ ಸ್ಪೀಸಿಸ್ ) ನಿಯಂತ್ರಣಕ್ಕೆ ಬಾರದೆ ರೇಷ್ಮೆ ಬೆಳೆಗಾರರು ಚಿಂತೆಗೀಡಾಗಿರುವಾಗಲೇ ರೇಷ್ಮೆ ಹುಳುಗಳಲ್ಲಿ ಗಂಟು ರೋಗ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ದೂಡಿದೆ. ತುಮಕೂರು ಜಿಲ್ಲೆಯ ಕುಣಿಗಲ್, ರಾಮನಗರ ಜಿಲ್ಲೆಯ ಮಾಗಡಿ, ಕನಕಪುರ ಭಾಗದ ಕೆಲ ಸರ್ಕಾರಿ ಬಿತ್ತನೆ ವಲಯ ಹಾಗೂ ಖಾಸಗಿ ಚಾಕಿ ಸಾಕಾಣಿಕೆ ಕೇಂದ್ರದಲ್ಲಿ ರೇಷ್ಮೆ ಹುಳುಗಳಿಗೆ ಗಂಟು ರೋಗ ಬಾಸುತ್ತಿದೆ.

ರೇಷ್ಮೆ ಹುಳುಗೆ ಗಂಟು ರೋಗ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರೇಷ್ಮೆ ಇಲಾಖೆ ಅಕಾರಿಗಳು ವಿಜ್ಞಾನಿಗಳೊಂದಿಗೆ ಅದರ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಬೆಳೆಗಾರರಿಂದ ಗಂಟುರೋಗದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇರುವ ಕಾರಣ ವಿಜ್ಞಾನಿಗಳ ತಂಡ ಗಂಟು ರೋಗವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಶ್ರಮಿ ವಹಿಸಿದೆ.

ರೋಗಕ್ಕೆ ಕಾರಣ ಮತ್ತು ಹರಡುವಿಕೆ:

ರೇಷ್ಮೆ ಹುಳುಗಳಲ್ಲಿ ಮೈಕ್ರೊಸ್ಪೊರೀಡಿಯಾಗಳಲ್ಲಿ ಒಂದಾದ ನೊಸೀಮಾ ಬಾಂಬಿಸಿಸ್ ಎಂಬ ಏಕಕಣ ಜೀವಿಯ ಸೋಂಕಿನಿಂದ ಗಂಟುರೋಗ ಎಂದು ಕರೆಯುವ ಅತ್ಯಂತ ಅಪಾಯಕಾರಿ ರೋಗ ಬರುತ್ತದೆ.

ಪ್ರಾರಂಭದಲ್ಲಿ ರೋಗಪೀಡಿತ ಹುಳುಗಳು ಆರೋಗ್ಯವಂತ ಹುಳುಗಳಂತೆ ಕಂಡು ಬಂದರೂ ಸೂಕ್ಷ್ಮ ದರ್ಶಕದಲ್ಲಿ ಪರೀಕ್ಷೆ ಮಾಡಿದಾಗ ಅಂಡಾಕಾರದ ಸ್ಪೋರುಗಳು ಕಂಡುಬರುತ್ತವೆ. ಈ ರೋಗ ತಾಯಿ ಚಿಟ್ಟೆಯಿಂದ ಭ್ರೂಣದ ಮುಖಾಂತರ ಹರಡುವುದು ಒಂದು ವಿಧವಾದರೆ, ಹಿಪ್ಪುನೇರಳೆ ಎಲೆಗಳ ಮುಖಾಂತರ ಸೋಂಕಿನಿಂದ ಬರುವುದು ಮತ್ತೊಂದು ವಿಧ. ರೋಗ ಉಲ್ಬಣಗೊಂಡಾಗ ಹುಳುಗಳು ಸೊಪ್ಪು ತಿನ್ನದೆ, ಚಟುವಟಿಕೆ ಕಳೆದುಕೊಂಡು, ಹುಳುಗಳ ಗಾತ್ರದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹುಳುಗಳು ನಂತರ ಕಂದು ಬಣ್ಣಕ್ಕೆ ತಿರುಗಿ ಸಾಯುತ್ತವೆ. ಕೆಲವೊಮ್ಮೆ ಸತ್ತ ಹುಳುಗಳು ಬ್ಯಾಕ್ಟೀರಿಯಾ ಸೋಂಕಿನ ಕಾರಣ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಗಂಟುರೋಗ ಪೀಡಿತ ಹೆಣ್ಣು ಚಿಟ್ಟೆಯು ಮೊಟ್ಟೆಯಿಟ್ಟಲ್ಲಿ, ಮೊಟ್ಟೆಗಳ ಸಂಖ್ಯೆ ಕಡಿಮೆಯಾಗಿ ಮೊಟ್ಟೆಗಳು ಗುಂಪಾಗಿ ಒಂದರ ಮೇಲೊಂದಿರುತ್ತವೆ.

ರೋಗಗ್ರಸ್ತ ಚಿಟ್ಟೆಗಳ ರೆಕ್ಕೆಯು ಮುದುರಿಕೊಂಡು, ದೇಹದ ಕೆಲವು ಭಾಗಗಳಿಂದ ತುಪ್ಪಟ ಉದುರಿ ಚಿಟ್ಟೆಯ ಮೈಮೇಲೆ ಗಾಯಗಳಾಕಾರಗಳು ಕಂಡುಬರುತ್ತವೆ.
ಸಾಮಾನ್ಯವಾಗಿ ಮಳೆ ಮತ್ತು ಚಳಿಗಾಲದಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ರೋಗಗ್ರಸ್ತ ಮೊಟ್ಟೆಯಿಂದ ರೋಗ ಉಂಟಾದರೆ ಮೊದಲೆರಡು ಹಂತಗಳಲ್ಲೆ ತೀವ್ರ ನಷ್ಟ ಕಾಣಿಸುತ್ತದೆ.
ಗಂಟುರೋಗ ಪೀಡಿತ ರೇಷ್ಮೆ ಹುಳುಗಳು ಹೊರಹಾಕುವ ಹಿಕ್ಕೆ ಮತ್ತು ಕರುಳು ರಸದಲ್ಲಿ ರೋಗಾಣುಗಳು ಇರುತ್ತವೆ. ಇದರಿಂದ ಹುಳು ಸಾಕಾಣಿಕೆ ವಾತಾವರಣ, ಉಪಕರಣಗಳು ಮತ್ತು ಹಿಪ್ಪುನೇರಳೆ ಸೊಪ್ಪಿಗೆ ಸೋಂಕು ತಗಲಿ ರೋಗ ಹರಡುವಿಕೆಗೆ ಕಾರಣವಾಗುತ್ತದೆ.

ರೋಗ ನಿಯಂತ್ರಣ ಕ್ರಮಗಳು:

ಬಿತ್ತನೆಕೋಠಿ, ಸಾಮಗ್ರಿ, ಹುಳು ಸಾಕಾಣಿಕೆ ಮನೆ, ಸಲಕರಣೆಗಳು ಮತ್ತು ಪರಿಸರ ಇವುಗಳನ್ನು ಸೋಂಕು ಮುಕ್ತ ಮಾಡುವುದರಿಂದ ಈ ರೋಗ ಹರಡುವುದನ್ನು ತಡೆಗಟ್ಟಬಹುದು. ರೋಗಪೀಡಿತ ಹುಳು/ಗೂಡು/ಮೊಟ್ಟೆಗಳನ್ನು ಸುಟ್ಟು ನಾಶಪಡಿಸಬೇಕು ಅಥವಾ ಹೂಳಬೇಕು. ಮೊಟ್ಟೆ ಉತ್ಪಾದನೆಯಲ್ಲಿ ಗಂಟು ರೋಗ ಗುರುತಿಸಲು ವೈಜ್ಞಾನಿಕ ಕ್ರಮಗಳಿಂದ ಕೂಡಿದ ತಾಯಿ ಚಿಟ್ಟೆ ಪರೀಕ್ಷೆ ವಿಧಾನವನ್ನು ಅನುಸರಿಸಬೇಕು. ಹುಳು ಸಾಕಾಣಿಕೆ ಅವಯಲ್ಲಿ ಅಸಮ ಹುಳುಗಳು, ಅಥವಾ ಹುಳು ಹಿಕ್ಕೆಯನ್ನು ಕಾಲಕಾಲಕ್ಕೆ ನಿಗದಿತ ವಿಧಾನದಲ್ಲಿ ಪರೀಕ್ಷಿಸಿ, ರೋಗಾಣು ಕಂಡು ಬಂದಲ್ಲಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಸೋಂಕು ನಿವಾರಿಸಬೇಕು ಎನ್ನುತ್ತಾರೆ ವಿಜ್ಞಾನಿಗಳು.

Spread the love

Related Articles

Leave a Reply

Your email address will not be published. Required fields are marked *

Back to top button