ಚಿಕ್ಕಮಗಳೂರುಜಿಲ್ಲಾ ಸುದ್ದಿ

ಸಾರ್ವಜನಿಕ ರಸ್ತೆಗೆ ಪ್ರಭಾವಿಗಳಿಂದ ಅಡ್ಡಿ; ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವ ಎಚ್ಚರಿಕೆ

ಚಿಕ್ಕಮಗಳೂರು: ಶತಮಾನಗಳಿಂದ ಗ್ರಾಮಸ್ಥರು ಸಂಚರಿಸಲು ಬಳಸುತ್ತಿದ್ದ ರಸ್ತೆಗೆ ಕೆಲ ಪ್ರಭಾವಿಗಳು ಗೇಟ್ ನಿರ್ಮಿಸಿ ಸಾರ್ವಜನಿಕರಿಗೆ ಅಡ್ಡಿಪಡಿಸಿದ್ದಾರೆ. ಇದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಆಲ್ದೂರು ಸಮೀಪದ ಚಿಕ್ಕಹಳ್ಳ ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಿಕ್ಕಹಳ್ಳ ಗ್ರಾಮದಿಂದ ಹೊರಸಂಪರ್ಕಕ್ಕೆ ಒಂದೇ ಮಾರ್ಗವಿದ್ದು, ಇಲ್ಲಿ ವಾಸಿಸುವ ಜನ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಗೊಬ್ಬರ, ಕೃಷಿ ಉತ್ಪನ್ನಗಳ ಸಾಗಣೆ, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಈಗ ಅಡ್ಡಗಟ್ಟಿ, ರಸ್ತೆಯಲ್ಲಿ ಸಂಚರಿಸದಂತೆ ಬೆದರಿಕೆ ಹಾಕತೊಡಗಿದದ್ದಾರೆ ಎಂದು ಆರೋಪಿಸಿದ್ದಾರೆ.

ಕಂದಾಯ ಇಲಾಖೆಯ ದಾಖಲೆಗಳಲ್ಲಿ, ಗೂಗಲ್ ನಕ್ಷೆಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ರಸ್ತೆಯ ಜಾಗವೆಂದು ನಮೂದಿಸಲಾಗಿದೆ. ಇತ್ತೀಚೆಗೆ ಈ ರಸ್ತೆಯ ಪಕ್ಕದಲ್ಲಿ ವಾಸವಿರುವ ಕೆಲ ಖಾಸಗಿ ವ್ಯಕ್ತಿಗಳು ರಾಜಕೀಯ ಪ್ರಭಾವ ಬಳಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಗ್ರಾಮಸ್ಥರಾದ ಪಿ ಎಚ್ ರಮೇಶ್, ರಾಮಚಂದ್ರ, ಸಿ ಎಸ್ ದೀಕ್ಷಿತ್ ತಿಳಿಸಿದ್ದಾರೆ.

ಆಲ್ದೂರು ಪೊಲೀಸರಿಗೆ, ತಹಸೀಲ್ದಾರರಿಗೆ, ಜಿಲ್ಲಾಧಿಕಾರಿಗಳವರೆಗೆ ದೂರು ಸಲ್ಲಿಸಿದರೂ ರಾಜಕೀಯ ಒತ್ತಡಕ್ಕೆ ಒಳಪಟ್ಟು ಗ್ರಾಮಸ್ಥರಿಗೆ ರಸ್ತೆ ಬಿಡಿಸಿಕೊಡದೇ ಗ್ರಾಮಸ್ಥರು ಸಂಘರ್ಷಕ್ಕಿಳಿಯುವಂತೆ ಮಾಡುತ್ತಿದ್ದಾರೆ. ಶಾಸಕ ಎಂಪಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಹವಾಲು ಹೇಳಿಕೊಂಡರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಾನುವಾರು, ವಿದ್ಯಾರ್ಥಿಗಳು ಮತ್ತು ಕುಟುಂಬಸ್ಥರು ಸೇರಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದಾಗಿ ಎಚ್ಚರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button