Breaking NewsLatestಮಹಿಳೆರಾಷ್ಟ್ರೀಯ

ಸಶಸ್ತ್ರ ಪಡೆಗೆ ಮಹಿಳೆಯರು; ಮುಂದಿನ ಮೇ ತಿಂಗಳಿಂದ ಪರೀಕ್ಷೆ ಬರೆಯಲು ಅವಕಾಶ

ನವದೆಹಲಿ: ಸಶಸ್ತ್ರ ಪಡೆಗೆ ಮಹಿಳೆಯರ ಪ್ರವೇಶಕ್ಕೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸಜ್ಜಾಗಿದ್ದು, 2022ರ ಮೇ ತಿಂಗಳಿಂದ ಮಹಿಳೆಯರು ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ.

ಮಂಗಳವಾರ ಸುಪ್ರಿಂ ಕೋರ್ಟ್​ಗೆ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್​ನಲ್ಲಿ ಸರ್ಕಾರ ಈ ವಿಚಾರವನ್ನು ಸ್ಪಷ್ಟಪಡಿಸಿದೆ.

ಇದಕ್ಕೆ ಸಂಬಂಧಿಸಿ ಅಗತ್ಯ ವೈದ್ಯಕೀಯ ಮತ್ತು ದೈಹಿಕ ಸಾಮರ್ಥ್ಯದ ಮಾನದಂಡಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ತೊಡಗಿದೆ. ಅಗತ್ಯ ಮೂಲಸೌಕರ್ಯಗಳನ್ನೂ ಸಿದ್ಧಪಡಿಸುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯೂ ಇದರಲ್ಲಿ ಸೇರಿರುತ್ತದೆ ಎಂದು ಅಫಿಡವಿಟ್​ನಲ್ಲಿ ಹೇಳಲಾಗಿದೆ.

ಮಹಿಳೆಯರಿಗಾಗಿ ಸೂಕ್ತ ಆಯ್ಕೆ ಮಾನದಂಡಗಳನ್ನು ರೂಪಿಸುವ ಪ್ರಕ್ರಿಯೆ ನಡೆದಿದೆ. ವಯಸ್ಸು ಮತ್ತು ತರಬೇತಿಯ ಸ್ವರೂಪವನ್ನು ಗಣನೆಗೆ ತೆಗೆದುಕೊಂಡು ಇದನ್ನು ರೂಪಿಸಲಾಗುವುದು ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.

ಮಹಿಳೆಯರನ್ನು ಸಶಸ್ತ್ರ ಪಡೆಗೆ ಸೇರಿಸಿಕೊಳ್ಳುವುದಕ್ಕೆ ಪೂರ್ವಭಾವಿಯಾಗಿ ಸ್ತ್ರೀರೋಗ ಪರಿಣಿತರು, ಕ್ರೀಡಾ ಔಷಧಿ ಪರಿಣತರು, ಕೌನ್ಸೆಲರ್​ಗಳು, ನರ್ಸಿಂಗ್ ಸಿಬ್ಬಂದಿ ಮತ್ತು ಮಹಿಳಾ ಅಟೆಂಡರ್​ಗಳನ್ನು ನೇಮಿಸಬೇಕಿದೆ ಎಂದು ಸರ್ಕಾರವು ತಿಳಿಸಿದೆ.

ನೀವಾಗಿಯೇ ತೀರ್ಮಾನಕ್ಕೆ ಬನ್ನಿ. ನಾವು ಆದೇಶ ಕೊಡುವ ಪ್ರಮೇಯ ತರಬೇಡಿ ಎಂದು ಆಗಸ್ಟ್​ನಲ್ಲಿ ಸುಪ್ರಿಂ ಕೋರ್ಟ್ ಎಚ್ಚರಿಸಿತ್ತು. ಅದಕ್ಕೆ ಉತ್ತರವಾಗಿ, ಮಹಿಳೆಯರು ಎನ್​ಡಿಎ ಪರೀಕ್ಷೆಗೆ ಕುಳಿತುಕೊಳ್ಳಬಹುದು ಎಂದು ಈ ತಿಂಗಳ ಆರಂಭದಲ್ಲಿ ಕೋರ್ಟ್​ ಮುಂದೆ ಸರ್ಕಾರ ಹೇಳಿತ್ತು.

ದೇಶದ ಸಶಸ್ತ್ರ ಪಡೆಯಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಅವಕಾಶದ ಮಾತು ಬಂದಾಗ ಕಾಣುವ ಲಿಂಗತಾರತಮ್ಯ ಮತ್ತು ಮನಃಸ್ಥಿತಿ ಸಮಸ್ಯೆಯನ್ನು ಕೋರ್ಟ್ ಕಟುವಾಗಿ ಟೀಕಿಸಿದ ಬಳಿಕ ಇದೆಲ್ಲ ಬೆಳವಣಿಗೆಗಳು ಆಗಿದ್ದವು.

Spread the love

Related Articles

Leave a Reply

Your email address will not be published. Required fields are marked *

Back to top button