ಧಾರವಾಡದಲ್ಲಿ ವಿದ್ಯಾರ್ಥಿಗಳ ಮೇಲೆ ಅಪರಿಚಿತ ರಿಂದ ಹಲ್ಲೆ; ರಾತ್ರೋ ರಾತ್ರಿ ಪ್ರತಿಭಟನೆ

ಧಾರವಾಡ: ಹೋಟೆಲ್ ಸೇರಿದಂತೆ ಮೆಸ್ಗಳಲ್ಲಿ ಊಟ ಮುಗಿಸಿಕೊಂಡು ಪಿಜಿ ಹಾಗೂ ರೂಮ್ಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ, ಅಪರಿಚಿತ ಯುವಕರು ಹಲ್ಲೆ ಮಾಡಿ ಯುವಕರಲ್ಲಿ ಆತಂಕ ಮೂಡಿಸಿದ ಘಟನೆ ಧಾರವಾಡಲ್ಲಿ ನಡೆದಿದೆ.
ನಗರದ ಸಪ್ತಾಪೂರ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಆತಂಕಗೊಂಡ ವಿದ್ಯಾರ್ಥಿಗಳು ರಾತ್ರೋ ರಾತ್ರಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಓದಲು ಬಂದಂತಹ ವಿದ್ಯಾರ್ಥಿಗಳು ಕಳೆದ ದಿನ ತಡ ರಾತ್ರಿ ತಮ್ಮ ಪಾಡಿಗೆ ತಾವು ಊಟ ಮುಗಿಸಿಕೊಂಡು ರೂಮುಗಳಿಗೆ ಹಾಗೂ ಓದಲು ಲೈಬ್ರರಿಗೆ ತೆರಳುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದಂತಹ ಯುವಕರ ತಂಡವೊಂದು ಏಕಾಏಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ಅಕ್ಕ ಪಕ್ಕದ ಮನೆಗಳಿಗೆ ಕಲ್ಲುಗಳನ್ನು ಎಸೆದು ಆತಂಕ ಮೂಡಿಸಿದೆ. ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳ ಸ್ನೇಹಿತರು ಹಲ್ಲೇಕೋರರನ್ನು ಪ್ರಶ್ನೆ ಮಾಡಲು ಆಗಮಿಸುತ್ತಿದಂತೆ ಅಪರಿಚಿತ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅಪರಿಚಿತರ ಹಲ್ಲೆಯಿಂದ ಮೂವರು ಜನ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.
ರಾತ್ರೋ ರಾತ್ರಿ ರಸ್ತೆಗೆಳಿದು ವಿದ್ಯಾರ್ಥಿಗಳ ಆಕ್ರೋಶ:
ಅಪರಿಚಿತ ದುಷ್ಕರ್ಮಿಗಳು ಮೂರು ಜನರ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಆತಂಕಗೊಂಡ ಸಪ್ತಾಪೂರ ಬಾವಿ ಬಳಿಯ ವಿದ್ಯಾರ್ಥಿಗಳು ರಾತ್ರೋರಾತ್ರಿ ತಮ್ಮ ರಕ್ಷಣೆಗಾಗಿ ದೊಣ್ಣೆ ಹಾಗೂ ಕೊಲು ಹಿಡಿದುಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ಸುಖಾ ಸುಮ್ಮನೆ ಓದಲು ಬಂದಂತಹ ವಿದ್ಯಾರ್ಥಿಗಳ ಮೇಲೆ ಅಪರಿಚಿತರಿಂದ ಹಲ್ಲೆ ಹೆಚ್ಚಾಗಿದೆ. ಇಂದು ಕೂಡಾ ಅದು ಮುಂದುವರೆದಿದೆ. ಕುಡಿದ ಅಮಲಿನಲ್ಲಿ ಬಂದು ಕೆಲವರು ರಸ್ತೆಯಲ್ಲಿ ಓಡಾಟ ಮಾಡುವ ವಿದ್ಯಾರ್ಥಿಗಳ ಜೊತೆಗೆ ಕಿರಿಕ್ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದರು.

ಸ್ಥಳಕ್ಕೆ ಎಸಿಪಿ ಅನುಷಾ ಭೇಟಿ
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳುತ್ತಿದಂತೆ ಸಪ್ತಾಪೂರ ಬಾವಿ ಬಳಿಯ ವಿದ್ಯಾರ್ಥಿಗಳ ಪ್ರತಿಭಟನೆ ಸ್ಥಳಕ್ಕೆ ಧಾರವಾಡ ಉಪನಗರ ಠಾಣೆಯ ಪೊಲೀಸರು, ವಿದ್ಯಾಗಿರಿ ಠಾಣೆಯ ಪೊಲೀಸರು ಹಾಗೂ ಎಸಿಪಿ ಅನುಷಾ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯರಿಂದ ಹಲ್ಲೇಕೋರರ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಪೊಲೀಸರ ತಂಡ, ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಹಲ್ಲೇಕೋರರಲ್ಲಿ ಓರ್ವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
