Latestರಾಜಕೀಯರಾಜ್ಯಸುದ್ದಿ

ಉತ್ತರ ಭಾರತದ ಭಾಷೆಯನ್ನು ಇಡೀ ದೇಶಕ್ಕೆ ಹೇರುವುದು ನ್ಯಾಯವೇ?

ಕಿರುಗುಂದ ರಫೀಕ್

ಭಾರತ ಸರ್ಕಾರ ಯಾಕೋ ಹಿಂದಿ ಭಾಷೆಗೆ ವಿಶೇಷವಾದ ಮನ್ನಣೆ ನೀಡತೊಡಗಿದೆ. ಹಿಂದಿಯೇತರ ರಾಜ್ಯಗಳಿಂದ ದೊಡ್ಡ ಮಟ್ಟದಲ್ಲಿ ವಿರೋಧವಿದ್ದರೂ ಅದನ್ನು ಲೆಕ್ಕಿಸದೆ ಸೆ.14ಕ್ಕೆ ಹಿಂದಿ ದಿವಸ್ ಆಚರಿಸಿದೆ.

ಇತರೆ ಹಲವು ದಿನಾಚರಣೆಗಳಂತೆ ವರ್ಷಕ್ಕೊಮ್ಮೆ ಇದೂ ಒಂದು ದಿನಾಚರಣೆ, ನಡೆಯಲಿ ಬಿಡಿ ಎಂದು ಹಲವರು ಎಣಿಸಿರಬಹುದು. ಆದರೆ ಮುಂದೊಂದು ದಿನ ದೇಶದಲ್ಲಿ ಹಿಂದಿಯೇ ಮುಖ್ಯ ಭಾಷೆಯಾಗುವ ಎಲ್ಲಾ ಲಕ್ಷಣಗಳೂ ಗೋಚರವಾಗತೊಡಗಿದೆ. ಇದರಿಂದ ಉಳಿದೆಲ್ಲಾ ಭಾಷೆಗಳೂ ನಶಿಸಿ ಹೋಗುವ ಅಪಾಯವಿರುವುದನ್ನು ಅಲ್ಲಗಳೆಯುವಂತಿಲ್ಲ.

ಕರ್ನಾಟಕದಲ್ಲಿ ಕನ್ನಡಪರ ಹೋರಾಟಗಾರರು, ಸಂಘಟನೆಗಳು, ಸಾಹಿತಿಗಳು, ಚಿಂತಕರು, ಲೇಖಕರು, ಪ್ರಮುಖ ರಾಜಯಕೀಯ ಪಕ್ಷಗಳು, ಪತ್ರಕರ್ತರು ಚಿತ್ರನಟರು ಹಿಂದಿ ಹೇರಿಕೆಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಹಾಗೆಯೇ ದೇಶದ ಹಿಂದಿಯೇತರ ಎಲ್ಲಾ ರಾಜ್ಯಗಳೂ ಹಿಂದಿ ಭಾಷೆಯ ಹೇರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಿದ್ದರೂ ಸರ್ಕಾರ ಹಿಂದಿ ಬೇಕೇ ಬೇಕೆಂದು ಜನರ ಮೇಲೆ ಒತ್ತಡ ಹಾಕುತ್ತಿದ್ದು, ಎಲ್ಲಾ ರಾಜ್ಯಗಳೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶಿಸತೊಡಗಿದೆ.

ಸಂವಿಧಾನದಲ್ಲಿ ಯಾವ ಭಾಷೆಗೂ ರಾಷ್ಟ್ರೀಯ ಸ್ಥಾನಮಾನ ಕೊಟ್ಟಿಲ್ಲ. ದೇಶದಲ್ಲಿ 1950ಕ್ಕೆ ಗಣರಾಜ್ಯ ವ್ಯವಸ್ಥೆ ಬಂದಿದೆ. ಆಯಾ ಪ್ರದೇಶದ ಜನರು ಆಡುವ ಭಾಷೆಗೆ ಅನುಗುಣವಾಗಿ ರಾಜ್ಯಗಳನ್ನು ವಿಂಗಡಿಸಲಾಗಿದೆ. ಹೀಗಾಗಿ ಭಾರತವು ಹಲವು ಭಾಷೆಯ ರಾಜ್ಯಗಳ ಒಕ್ಕೂಟವಾಗಿ ರೂಪುಗೊಂಡಿದೆ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹಿಂದಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಇಡೀ ದೇಶಕ್ಕೆ ಅದನ್ನು ಹೇರಿಕೆ ಮಾಡುವುದರಲ್ಲಿ ನ್ಯಾಯವಿದೆಯೇ? ಹಿಂದಿ ಬಾರದವರು ಭಾರತೀಯರಲ್ಲವೇ?

ಭಾರತವು ಒಕ್ಕೂಟ ರಾಷ್ಟ್ರವಾಗಿದ್ದು, ವಿವಿಧ ಭಾಷೆ, ವಿವಿಧ ಮತ-ಪಂಥ, ವಿವಿಧ ಸಂಸ್ಕೃತಿಯ ಆಗರವಾಗಿದೆ. ಹೀಗಿರುವಾಗ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವುದು ಹೀಗೇ ಮುಂದುವರಿದರೆ, ಹಿಂದಿ ಭಾಷೆ ವಿರುದ್ಧ ಜನರು ತೀವ್ರ ಹೋರಾಟ ನಡೆಸಬೇಕಾಗಬಹುದು. ಅಲ್ಲದೆ ದೇಶದಲ್ಲಿ ಭಾಷಾವಾರು ಪ್ರತ್ಯೇಕತೆಯ ಕೂಗು ಕೇಳಿಬಂದರೂ ಆಶ್ಚರ್ಯವಿಲ್ಲ.

ಯಾವುದೇ ಭಾಷೆಯ ಕಲಿಕೆಗೆ ವಿರೋಧವಿಲ್ಲ. ಭಾಷೆಯನ್ನು ಬಲಾತ್ಕಾರವಾಗಿ ಹೇರುವ ಕುಟಿಲತೆಗೆ ವಿರೋಧವಿದೆ. ವಿರೋಧಿಸುತ್ತಿರುವುದು ಹಿಂದಿ ಭಾಷೆಯನ್ನಲ್ಲ, ಅದರ ಹೇರಿಕೆಯ ರಾಜಕೀಯವನ್ನು. ಹಿಂದಿ ದಿವಸವನ್ನು ಹಿಂದೆಯೂ ವಿರೋಧಿಸಿದ್ದೇನೆ. ಮುಂದೆಯೂ ವಿರೋಧಿಸುತ್ತೇನೆ

– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ. ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿ ಕೂಡ ಒಂದು ಭಾಷೆಯಷ್ಟೇ. ಕೇಂದ್ರ ಸರ್ಕಾರ ಹಿಂದಿಗೆ ಇಂದ್ರ ವೈಭೋಗ ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ”

-ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಹಿಂದಿಯನ್ನು ಹಿಂದೀಯೇತರ ಭಾಷಿಕ ಸಮುದಾಯಗಳ ಮೇಲೆ ಹೇರಲು ಒಕ್ಕೂಟ ಸರ್ಕಾರದ ದುರುದ್ದೇಶವಿದೆ. ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡ ಇತ್ಯಾದಿ ಹೆಸರುಗಳಲ್ಲಿ ನಮ್ಮೆಲ್ಲರ ತೆರಿಗೆ ಹಣವನ್ನು ಬಳಸಲಾಗುತ್ತಿದೆ. ಇದನ್ನು ಎಲ್ಲಾ ಕನ್ನಡಿಗರೂ ಖಂಡಿಸಬೇಕಾಗಿದೆ”

ಟಿ ಎ ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ

ಹಿಂದಿ ಭಾಷೆ ಮಾತ್ರವೇ ಶ್ರೇಷ್ಠಭಾಷೆ ಎಂದು ಬಿಂಬಿಸಲು ಸರ್ಕಾರ ಹೊರಟಿದೆ. ಹಿಂದಿ ದರ್ಬಾರಿನಲ್ಲಿ ಕನ್ನಡಕ್ಕೆ ಅಪಾಯ ಕಾದಿದೆ. ನಮಗೆ ಕನ್ನಡವೇ ರಾಷ್ಟ್ರಭಾಷೆ, ಕನ್ನಡವೇ ಸಾರ್ವಭೌಮ, ಕನ್ನಡಿಗರನ್ನು ಮತ್ತೆ ಮತ್ತೆ ಕೆರಳಿಸಬೇಡಿ”

-ವಾಟಾಳ್ ನಾಗರಾಜ್, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ

ಹಿಂದಿಯನ್ನು ರಾಷ್ಟ್ರಭಾಷೆ ಎಂದು ಪ್ರಚುರಪಡಿಸುತ್ತಿರುವುದು ಖಂಡನೀಯ

“ನಾವು ಕನ್ನಡಿಗರು ವಿಶಾಲ ಹೃದಯದವರು, ಕನ್ನಡಕ್ಕಿಂತ ಬೇರೆ ಭಾಷೆಯನ್ನೇ ಹೆಚ್ಚಾಗಿ ಮಾತಾಡ್ತೀವಿ!” ಎಂಬ ದುಗುಡವನ್ನು ವ್ಯಂಗ್ಯದ ಧಾಟಿಯಲ್ಲಿ ನನ್ನ ಪ್ರೀತಿಯ ಚಿತ್ರನಟ ಉಪೇಂದ್ರ ಅವರು ತಮ್ಮ ನಟನೆಯ ʼಬುದ್ಧಿವಂತʼ ಸಿನಿಮಾದಲ್ಲಿ ಸಂಭಾಷಣಾತ್ಮಕವಾಗಿ ಅಭಿವ್ಯಕ್ತಮಾಡಿದ್ದಾರೆ. ಇದು ಕನ್ನಡವು ಕನ್ನಡಿಗನ ಎದೆಯಲ್ಲಿ ಉಳಿಯಬೇಕಾದ ಅವಶ್ಯಕತೆ ಹಾಗೂ ಸಮಕಾಲೀನ ಪರಿಸ್ಥಿತಿಯನ್ನು ತಿಳಿಸಿದೆ.

ನಾವಿಂದು ಸಂಪರ್ಕ ಭಾಷೆಯಾಗಿ ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳನ್ನು ಕಲಿಯುವುದು ಅನಿವಾರ್ಯವಾಗಿದೆ. ಆದರೆ ಈ ನಿಟ್ಟಿನಲ್ಲಿ ನಮ್ಮ ಭಾಷೆಗೆ ಮೊದಲ ಆದ್ಯತೆ ನಮ್ಮ ರಾಜ್ಯದಲ್ಲಿಯೇ ಇಲ್ಲವೆಂದರೆ ಏನರ್ಥ? ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವುದು, ಅದರ ಹೆಸರಿನಲ್ಲಿ ದಿವಸವನ್ನು ರಾಷ್ಟ್ರವ್ಯಾಪಿ ಆಚರಿಸುವ ಮೂಲಕ ಪ್ರಾದೇಶಿಕ ಭಾಷೆಗಳ ಬದಲಿಗೆ ಶೈಕ್ಷಣಿಕ, ಔದ್ಯೋಗಿಕ, ಆಡಳಿತಾತ್ಮಕ ಕ್ಷೇತ್ರದಲ್ಲಿ ಅನಿವಾರ್ಯ ಎಂಬಂತೆ ರಾಷ್ಟ್ರಭಾಷೆ ಎಂದು ಪ್ರಚುರಪಡಿಸುತ್ತಿರುವುದು ಖಂಡಿತವಾಗಿಯೂ ಖಂಡನೀಯ.

ಬ್ಯಾಂಕಿನ ಚಲನ್ ಗಳು ಒಳಗೊಂಡಂತೆ ಅನೇಕ ಸರ್ಕಾರಿ ಪತ್ರಗಳು ಹಾಗೂ ನಾಮ ಫಲಕಗಳ ಮೇಲೆ ಹಿಂದಿ ಹಾಗೂ ಇಂಗ್ಲಿಷ್ ಅಕ್ಷರಗಳ ಬರಹಗಳು ರಾರಾಜಿಸುವ ದುಸ್ಥಿತಿಗೆ ಇಂದಿನ ಆಡಳಿತ ವ್ಯವಸ್ಥೆ ತಲುಪಿದೆ. ಎಂದರೆ ತನ್ನತನದ ಅಸ್ಮಿತೆಯನ್ನು ಗಟ್ಟಿಯಾಗಿ ವ್ಯಕ್ತಪಡಿಸುವ ಮೂಲಕ ಪ್ರತಿಯೊಬ್ಬ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದೆ.

ನಮಗೆ ಕರ್ನಾಟಕದ ನೆಲ, ಜಲ, ಉಸಿರು ಬೇಕು, ಆದರೆ ಭಾಷೆ ಬೇಡವೆಂದರೆ ಹೇಗೆ? ಇದೆಲ್ಲದರ ನಡುವೆ ಇಂದಿನ ಬಂಡವಾಳ ಶಾಹಿ ಜಗತ್ತಿನಲ್ಲಿ ಎಲ್ಲರೂ ಹಣದ ಹಿಂದೆ ಓಡುತ್ತಿರುವ ಸಂದರ್ಭವಿದು. ಈ ಹೊತ್ತಿನಲ್ಲಿ ಭಾಷೆ ಮತ್ತು ಭಾವನೆಗಳನ್ನು ಕುರಿತು ನನ್ನಂತೆ ಹೀಗೆ ಮಾತನಾಡುವವನು ಹುಚ್ಚನಂತೆ ಕಾಣಿಸುತ್ತೇನಾ? ಸಂವೇದನೆ ಕಳೆದುಕೊಳ್ಳುತ್ತಿರುವ ಪ್ರಸ್ತುತ ವಿದ್ಯಮಾನಗಳೇ ಉತ್ತರಿಸಬೇಕು!

-ಡಾ.ಸಂಪತ್ ಬೆಟ್ಟಗೆರೆ, ಲೇಖಕ

Spread the love

Related Articles

Leave a Reply

Your email address will not be published. Required fields are marked *

Back to top button