ಮೆಟ್ರೋ

ಹಿಂದಿ ದಿವಸ್ ವಿರೋಧಿಸಿ ಕರಾಳ ದಿನ: ವಾಟಾಳ್ ನಾಗರಾಜ್

ಬೆಂಗಳೂರು: ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಅಸ್ಮಿತೆಗೆ ಧಕ್ಕೆಯಾಗತೊಡಗಿದ್ದು, ಕೇಂದ್ರ ಸರ್ಕಾರದ ಸೆ.14ಕ್ಕೆ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಕರಾಳ ದಿನಾಚರಣೆ ಆಚರಿಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೆ.14ರಂದು ಕರಾಳ ದಿನಾಚರಣೆ ಆಚರಿಸಲಾಗುವುದು. ಹಿಂದಿ ಭಾಷೆಯನ್ನು ಇತರೆ ಭಾಷಿಕರ ಮೇಲೆ ಹೇರಿಕೆ ಮಾಡಲಾಗುತ್ತಿದೆ. ಹಿಂದಿ ದರ್ಬಾರಿನಲ್ಲಿ ಕನ್ನಡ ಭಾಷೆಗೆ ಅಪಾಯ ಕಾದಿದೆ. ನಮಗೆ ಕನ್ನಡವೇ ರಾಷ್ಟ್ರಭಾಷೆ. ಕನ್ನಡವೇ ಸಾರ್ವಭೌಮ. ಕನ್ನಡಿಗರನ್ನು ಕೆರಳಿಸಬೇಡಿ. ಹಿಂದಿ ದಿವಸ್ ಆಚರಣೆ ಮೂಲಕ ಹಿಂದಿ ಭಾಷೆ ಮಾತ್ರವೇ ಶ್ರೇಷ್ಠವೆಂದು ಬಿಂಬಿಸಲು ಕೇಂದ್ರ ಸರ್ಕಾರ ಹೊರಟಿದೆ. ಒಕ್ಕೂಟ ವ್ಯವಸ್ಥೆಯೊಳಗೆ ಇದೆಲ್ಲಾ ನಡೆಯೋದಿಲ್ಲ. ಇದರ ವಿರುದ್ಧ ಕರಾಳ ದಿನಾಚರಣೆ ಆಚರಿಸುವ ಮೂಲಕ ರಾಜ್ಯಾದ್ಯಂತ ನಿರಂತರ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪುಸ್ತಕ ಪ್ರಾಧಿಕಾರ ಸಹಿತ ಯಾವುದೇ ಪ್ರಾಧಿಕಾರಗಳು ಈ ಕುರಿತು ಮೌನವಹಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ರಾಜ್ಯದಲ್ಲಿ ಎಲ್ಲಾ ಸಾರ್ವಜನಿಕ ವ್ಯವಹಾರಗಳು, ಬ್ಯಾಂಕ್ ಗಳು, ಅಂಚೆ ಕಚೇರಿ, ರೈಲ್ವೆ, ಖಾಸಗಿ ಕಂಪನಿ ಹಾಗೂ ಎಲ್ಲಾ ವಲಯಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆಯಾಗಬೇಕು. ಈ ಬಗ್ಗೆ ಕೇವಲ ಕನ್ನಡಪರ ಸಂಘಟನೆಗಳು ಮಾತ್ರ ಧ್ವನಿ ಎತ್ತಿದರೆ ಸಾಲದು. ಎಲ್ಲಾ ಸಂಘ-ಸಂಸ್ಥೆಗಳು, ಪ್ರಜ್ಞಾವಂತರು ಕನ್ನಡದ ಉಳಿವಿಗಾಗಿ ಬೀದಿಗಿಳಿಯಬೇಕಾಗಿದೆ ಎಂದು ಕರೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button