ಕಲಬುರಗಿ ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ – ಕಾಂಗ್ರೆಸ್ ಪೈಪೋಟಿ: ಜೆಡಿಎಸ್ ನಡೆ ಇನ್ನೂ ನಿಗೂಡ

ಕಲಬುರಗಿ: ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಭದ್ರಕೋಟೆ ಪಾಲಿಕೆಯಲ್ಲಿ ಕಮಲ ಅರಳಿಸಿರುವ ಬಿಜೆಪಿ ನಾಯಕರು, ಜೆಡಿಎಸ್ ಜೊತೆ ಮೈತ್ರಿಗೆ ನಾನಾ ರೀತಿಯ ಕಸರತ್ತು, ತಂತ್ರಗಾರಿಕೆ ಮುಂದುವರಿಸಿದ್ದಾರೆ. ಆಡಳಿತಕ್ಕಾಗಿ ಬಿಜೆಪಿಯ ಟಫ್ ಫೈಟ್ ನಿಂದ ಕಾಂಗ್ರೆಸ್ ನೂತನ ಪಾಲಿಕೆ ಸದಸ್ಯರಿಗೆ ಅಧಿಕಾರ ಕೈ ಜಾರುವ ಆತಂಕ ಶುರುವಾಗಿದೆ. ಡಿಕೆಶಿ, ಸಿದ್ದರಾಮಯ್ಯ ಸೈಲೆಂಟ್ ನಡೆ ಕಾಂಗ್ರೆಸ್ ಸದಸ್ಯರಿಗೆ ಟೆನ್ಛನ್ ಕೊಡುತ್ತಿದೆ.
ಪಾಲಿಕೆ ಎಲೆಕ್ಷನ್ ನಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೆ ಕಲಬುರಗಿ ಮತದಾರ ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ಕೊಟ್ಟಿದ್ದಾನೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್, ಬಿಜೆಪಿ ಪಾಲಿಕೆ ಚುಕ್ಕಾಣಿ ಹಿಡಿಯಲು ಒದ್ದಾಡುತ್ತಿವೆ. ನಾಲ್ಕು ಸ್ಥಾನ ಗೆದ್ದು ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್, ಮೇಯರ್ ಸ್ಥಾನದ ಡಿಮ್ಯಾಂಡ್ ಮಾಡ್ತಾ ಕಾಂಗ್ರೆಸ್, ಬಿಜೆಪಿಗೆ ಮುಳುವಾಗಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಅತೀ ಹೆಚ್ಚು ಕಮಲ ಅರಳಿರುವ ಬಿಜೆಪಿ, ಶತಾಯ- ಗತಾಯ ಆಡಳಿತ ನಡೆಸಲು ಇನ್ನಿಲ್ಲದ ಹರಸಾಹಸ ನಡೆಸುತ್ತ ಜೆಡಿಎಸ್ ಜೊತೆ ಮೈತ್ರಿಗಾಗಿ ಕಸರತ್ತು ನಡೆಸುತ್ತಿದೆ.
ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಿಂಗಲ್ಲಾಗಿ ಫೈಟ್ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯರ ಸೈಲೆಂಟ್ ನಡೆ ಕಾಂಗ್ರೆಸ್ ನ ಪಾಲಿಕೆ ಸದಸ್ಯರಿಗೆ ವಿಪರೀತ ಟೆನ್ಛನ್ ಕೊಡ್ತಿದೆ.
ನಾಲ್ವರು ಜೆಡಿಎಸ್ ಸದಸ್ಯರು ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಕುಮಾರಸ್ವಾಮಿ, ದೇವೆಗೌಡರನ್ನು ನಿರಂತರ ಭೇಟಿಯಾಗಿ ಚರ್ಚೆ ನಡೆಸುತ್ತಿರುವ ಜೆಡಿಎಸ್ ಸದಸ್ಯರು ಕಿಂಗ್ ಆಗಿ ಆಡಳಿತ ನಡೆಸಲು ಗೇಮ್ ಪ್ಲ್ಯಾನ್ ನಡೆಸುತ್ತಿದ್ದಾರೆ. ಕುಮಾರಸ್ವಾಮಿ, ದೇವೆಗೌಡರು ಎರಡು ಪಕ್ಷಗಳ ಜೊತೆ ಮೈತ್ರಿ ವಿಚಾರವಾಗಿ ವಿಭಿನ್ನ ಬ್ಯಾಟ್ ಬೀಸುತ್ತಿರುವುದು ಕಾಂಗ್ರೆಸ್, ಬಿಜೆಪಿಗೆ ಕಗ್ಗಂಟಾಗಿದೆ. ಕಮಲ ಜೊತೆ ಮೈತ್ರಿಗೆ ಕುಮಾರಸ್ವಾಮಿ ಒಲವು ತೋರುತ್ತಿದ್ರೆ, ದೇವೆಗೌಡರು ಕೈ ಕುಲುಕುವ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ತಂತ್ರಗಾರಿಕೆ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಪಾಲಿಕೆಯ ಐದು ವರ್ಷದ ಆಡಳಿತಾವಧಿಯಲ್ಲಿ ಐದುಬಾರಿ ಮೇಯರ್ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಮೊದಲ ಹಂತದ ಮೇಯರ್ ಸ್ಥಾನ ಸೇರಿ ಎರಡು ಬಾರಿ ಜೆಡಿಎಸ್ ಮೇಯರ್ ಪಟ್ಟಕ್ಕಾಗಿ ಲೆಕ್ಕಾಚಾರ ಹಾಕಿಕೊಂಡು ಅಧಿಕಾರಕ್ಕಾಗಿ ತಂತ್ರಗಾರಿಕೆ ಮುಂದುವರಿಸಿದ್ದಾರೆ.
ಒಟ್ನಲ್ಲಿ ಕಲಬುರಗಿ ಪಾಲಿಕೆ ಆಡಳಿತ ಚುಕ್ಕಾಣಿಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಗ್ಗ- ಜಗ್ಗಾಟ ಮುಂದುವರಿದಿದೆ. ಮೇಯರ್ ಆಯ್ಕೆ ದಿನಾಂಕ ಘೋಷಣೆ ಆಗ್ತಿದ್ದಂತೆ ಜೆಡಿಎಸ್ ತನ್ನ ಸಪೋರ್ಟ್ ಯಾರಿಗೆ ಅನ್ನೋದು ಬಹಿರಂಗಗೊಳಿಸುವ ಸಾಧ್ಯತೆ ಇದೆ.
