ಸಂಚಾರಕ್ಕೆ ಮುಕ್ತಗೊಳ್ಳಲಿದೆ ಖಾಂಡ್ಯ : ಬಾಳೆಗದ್ದೆ ಸಂಪರ್ಕದ ಹೊಸ ತೂಗುಸೇತುವೆ

ಚಿಕ್ಕಮಗಳೂರು: ಸಂಗಮೇಶ್ವರ ಪೇಟೆಯ ಖಾಂಡ್ಯ ಬಳಿ ಭದ್ರಾ ನದಿ ದಾಟಲು ನಿರ್ಮಿಸಿರುವ ತೂಗುಸೇತುವೆ ಸದ್ಯವೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಲಿದೆ.
ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಮಹಾಮಳೆಗೆ ಭದ್ರಾ ನದಿ ರಭಸದಲ್ಲಿ ಹರಿಯುತ್ತಿದ್ದಾಗ ನೀರಿನಲ್ಲಿ ಕೊಚ್ಚಿಬಂದ ಮರದ ದಿಮ್ಮಿಗಳಿಂದ ಹಿಂದೆಯಿದ್ದ ಸೇತುವೆ ಹಾನಿಗೀಡಾಗಿತ್ತು.
ಇದರಿಂದ ನದಿಯಾಚೆಗಿದ್ದ ಬಾಳೆಗದ್ದೆಯಲ್ಲಿ 45 ಕುಟುಂಬಗಳು ಸಂಗಮೇಶ್ವರಪೇಟೆ, ಬಾಳೆಹೊನ್ನೂರು ಕಡೆಗೆ ಸಂಚರಿಸಲಾಗದೆ ನದಿಯಲ್ಲಿ ತಾತ್ಕಾಲಿಕ ದೋಣಿ ವ್ಯವಸ್ಥೆ ಮಾಡಲಾಗಿತ್ತು. ಹಿಂದೆ ಈ ಭಾಗದ ಜನ ತೆಪ್ಪದ ಮೂಲಕ ಮೂಲಕ ಭದ್ರಾನದಿಯನ್ನು ದುಸ್ಸಾಹಸದಿಂದ ದಾಟುತ್ತಿದ್ದರು. 90ರ ದಶಕದಲ್ಲಿ ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿದ್ದರು.
ಇಂತಹ ಅನಾಹುತಗಳು ಇನ್ನುಮುಂದೆ ಸಂಭವಿಸಬಾರದು ಎಂಬ ಕಾರಣಕ್ಕೆ ಸರ್ಕಾರದ ಅನುದಾನದಲ್ಲಿ, ಆಗ ಶಾಸಕರಾಗಿ ಜೀವರಾಜ್ ಇದ್ದಾಗ ಸುಳ್ಯ ಮೂಲದ ತೂಗುಸೇತುವೆ ಪರಿಣಿತ ಗಿರೀಶ್ ಭಾರದ್ವಾಜ್ 43 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ತೂಗು ಸೇತುವೆ ನಿರ್ಮಿಸಿಕೊಟ್ಟಿದ್ದರು. ನಂತರ ಬಾಳೆಗದ್ದೆ ಜನರ ಓಡಾಟಕ್ಕೆ ಅನುಕೂಲವೂ ಆಗಿತ್ತು. ಪ್ರವಾಸಿಗರು ಕೂಡ ಇಲ್ಲಿನ ತೂಗುಸೇತುವೆಯನ್ನು ವೀಕ್ಷಿಸಿ ಭದ್ರಾ ನದಿಯ ಸುತ್ತಮುತ್ತಲ ಸೌಂದರ್ಯ ಸವಿಯುತ್ತಿದ್ದರು.
ಆದರೆ ಆ ಸೇತುವೆ ಕಳೆದ ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಕಿತ್ತುಹೋಗಿದ್ದ ಕಾರಣ ಶೀಘ್ರವೇ ಹೊಸ ಸೇತುವೆ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಕ್ಕೆ ಸ್ಪಂದಿಸಿದ ಶಾಸಕ ಟಿ ಡಿ ರಾಜೇಗೌಡ ಹೊಸ ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿದ್ದು, ಹಳೆಯ ಸೇತುವೆ ನವೀಕರಿಸುವ ಬದಲು 3.65 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪತಂಜಲಿ ಭಾರದ್ವಾಜ್ ನೇತೃತ್ವದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ.
ಸೇತುವೆ ನಿರ್ಮಾಣ ಕಾರ್ಯದಲ್ಲಿ 16 ಮಂದಿ ಶ್ರಮಿಸಿದ್ದು, ಸೇತುವೆಯು 210 ಮೀ. ಉದ್ದವಿದೆ. 1.20 ಮೀ.ಅಗಲ ಹಾಗೂ 110 ಅಡಿ ಎತ್ತರದ 4 ಕಂಬಗಳನ್ನು ಹೊಂದಿದೆ. 34 ಪ್ಲೇಟ್ ಬಳಕೆಯಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.




