20 ಗೋಲ್ಡ್ ಮೆಡಲ್ ಪಡೆದ ಕುಗ್ರಾಮದ ವಿದ್ಯಾರ್ಥಿನಿ ಚೈತ್ರಾ ಹೆಗಡೆ

ಕಾರವಾರ : ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿರುವ ಶಿರಸಿ ತಾಲೂಕಿನ ಶೀಗೆಹಳ್ಳಿಯ ಚೈತ್ರಾ ನಾರಾಯಣ ಹೆಗಡೆ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆದು ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಓದುತ್ತಿರುವ ಚೈತ್ರಾ ಮಂಗಳವಾರ ನಡೆದ 101ನೇ ಘಟಿಕೋತ್ಸವದಲ್ಲಿ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆದಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಲ್ಲೋಟ್ ಈ ಪದಕ ಪ್ರದಾನ ಮಾಡಿದರು.
ಸದ್ಯ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಚೈತ್ರಾ ಮೆಡಿಸಿನ್ ಕೆಮಿಸ್ಟ್ರಿಯಲ್ಲಿ ಸಂಶೋಧನೆ ಮಾಡುವ ಆಸಕ್ತಿ ಇದೆ ಎಂದು ಹೇಳಿದ್ದಾರೆ.
ಅತಿ ಹೆಚ್ಚು ಚಿನ್ನದ ಪದಕ ಪಡೆಯುವ ಶ್ರೇಯ ನನ್ನದಾಗಿದ್ದು,ಇದಕ್ಕೆ ತಂದೆ ನಾರಾಯಣ ಹೆಗಡೆ ಹಾಗೂ ತಾಯಿ ಸುಮಂಗಲಾ ಹೆಗಡೆ ಕಾರಣವಾಗಿದ್ದಾರೆ. ಈ ಎಲ್ಲ ಪದಕಗಳು ಅವರಿಗೆ ಸಮರ್ಪಿತ್ತೇನೆ ಎಂದಿದ್ದಾರೆ.
ಪಿಜಿಯಲ್ಲಿ ಇದ್ದುಕೊಂಡೇ ಓದಿದೆ. ಹೆಚ್ಚು ಪದಕಗಳನ್ನು ಪಡೆಯಬೇಕೆಂಬ ಮಹದಾಸೆಯೂ ಇತ್ತು. ಆದರೆ ಇಪ್ಪತ್ತು ಪದಕಗಳನ್ನು ಗಳಿಸುವೆ ಎಂದುಕೊಂಡಿರಲಿಲ್ಲ. ಈಗ ಅನಿರೀಕ್ಷಿತ ಫಲಿತಾಂಶದಿಂದ ಏಕಕಾಲಕ್ಕೆ ಅಚ್ಚರಿಯೂ, ಸಂತೋಷವೂ ಆಗಿದೆ ಎಂದು ಚೈತ್ರಾ ಸಂತಸ ಹಂಚಿಕೊಂಡಿದ್ದಾರೆ.
ತಂದೆ ನಾರಾಯಣ ಹೆಗಡೆ ಹಾಗೂ ತಾಯಿ ಸುಮಂಗಲಾ ಹೆಗಡೆ ಅವರಿಗೆ ಈ ಎಲ್ಲ ಪದಕಗಳು ಸಮರ್ಪಿತ.ಅವರು ಯಾವತ್ತೂ ನನ್ನ ಮೇಲೆ ಒತ್ತಡ ಹೇರಲಿಲ್ಲ. ಬದಲಿಗೆ ನಾನು ಇಷ್ಟಪಟ್ಟ ವಿಷಯ ಆಯ್ಕೆ ಮಾಡಿಕೊಂಡು ಓದಲು ಅವಕಾಶ ಮಾಡಿಕೊಟ್ಟರು. ಬೋಧಕರಿಗೂ ಧನ್ಯವಾದ ಅರ್ಪಿಸುವೆ ಎಂದ ಅವರು ಪಿಯು ಓದುತ್ತಿದ್ದಾಗ ನನ್ನೂರಿಗೆ ಬೆಳಿಗ್ಗೆ, ಸಂಜೆ ಮಾತ್ರ ಬಸ್ ಬರುತಿತ್ತು. ಅದು ತಪ್ಪಿದರೆ ಪೋಷಕರೇ ಕರೆದುಕೊಂಡು ಹೋಗಬೇಕಿತ್ತು. ಈಗಲೂ ಈ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.




