
ಐಟಿ ಕ್ಷೇತ್ರವನ್ನು ತನ್ನ ಪರವಾಗಿರುವ ಉದ್ಯಮ ಪತಿಗಳ ಕೈಗೆ ಹೋಗುವಂತೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಮತ್ತು ಉದ್ಯಮಗಳು ಕೂಡ ತನ್ನ ಅಜೆಂಡಾದಂತೆ ನಡೆದುಕೊಳ್ಳುವಂತೆ ಎಚ್ಚರಿಸುವ ಪಿತೂರಿ ಇದಾಗಿದೆ.
ಎಂ ಹೈದರ್
ಐಟಿ ಕ್ರಾಂತಿಯಲ್ಲಿ ಮಹತ್ವದ ಸಾಧನೆಗೈದ ಭಾರತದ ದೊಡ್ಡ ಐಟಿ ಕಂಪನಿ ಇನ್ಪೊಸಿಸ್ ಜಾಗತಿಕ ಮಟ್ಟದಲ್ಲಿ ಐಟಿ ಕ್ಷೇತ್ರದಲ್ಲಿ ದೇಶದ ಗೌರವ ಹೆಚ್ಚಲು ಕಾರಣವಾಗಿದೆ. ಬೆಂಗಳೂರಿನಿಂದ ಕಾರ್ಯಾಚರಿಸುವ ಈ ಐಟಿ ದಿಗ್ಗಜ ಕಂಪನಿ ವಿಶ್ವದ 50 ದೇಶಗಳಲ್ಲಿ ಸುಮಾರು 2.64 ಲಕ್ಷ ಉದ್ಯೋಗಿಗಳನ್ನು ಹೊಂದಿದೆ ಇಂತಹ ಇನ್ಪೊಸಿಸ್ ಬಗ್ಗೆ ಸಂಘ ಪರಿವಾರದ ಮುಖವಾಣಿ ಎಂದೇ ಹೇಳಲಾಗುವ ಹಿಂದಿ ಸಾಪ್ತಾಹಿಕ ಪಾಂಚಜನ್ಯ ಈಗ ಗಂಭೀರ ಆರೋಪಗಳನ್ನು ಮಾಡಿದೆ. ಸಂಘಪರಿವಾರದ ಕಣ್ಣಿಗೆ ಇನ್ಫೋಸಿಸ್ ಈಗ ದೇಶದ್ರೋಹಿಯಂತೆ ಕಾಣುತ್ತಿದೆಯೇ?
ಇನ್ಪೊಸಿಸ್ ತನ್ನ ವೆಬ್‌ಸೈಟ್ ಪೋರ್ಟಲ್ ಸೇವೆಯನ್ನು ದುರುಪಯೋಗಪಡಿಸಿಕೊಂಡು ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆಯಂತೆ. ಅಲ್ಲದೇ ಅದು ದೇಶದ್ರೋಹಿಗಳಿಗೆ, ಕಮ್ಯುನಿಸ್ಟ್ ಮತ್ತು ಎಡಪಂಥೀಯ ಚಿಂತನೆಗಳ ಜೊತೆ ಮತ್ತು ತುಕ್ಡೆತುಕ್ಡೆ ಗ್ಯಾಂಗ್ಗಳಿಗೆ ಪಂಡಿಂಗ್ ಮಾಡುತ್ತಿದೆಯಂತೆ.
ಪಾಂಚಜನ್ಯದ ಸಾಪ್ತಾಹಿಕ ಅಂಕಣ ಸಾಕ್ ಔರ್ ಆಘಾತ್ನಲ್ಲಿ ಇನ್ಪೊಸಿಸ್ನ ನಾರಾಯಣ ಮೂರ್ತಿ ಅವರನ್ನು ದೇಶ ವಿರೋಧಿ ಎಂದು ಬಿಂಬಿಸಲಾಗಿದೆ.
ತನ್ನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕದ ಮತ್ತು ತನ್ನನ್ನು ಪ್ರಶ್ನೆ ಮಾಡುವ ಯಾರನ್ನೇ ಆದರೂ ಈ ಸಂಕುಚಿತ ಮನೋಭಾವದ ಸಂಘಪರಿವಾರ ಮತ್ತು ಬಿಜೆಪಿ ದೇಶದ್ರೋಹಿ ಎಂದು ಬಿಂಬಿಸಲು ಯತ್ನಿಸುವುದು ಈಗ ಸಾಮಾನ್ಯವಾಗಿದೆ.
ಮಾಧ್ಯಮಗಳ ಮೇಲೆ ಲಗಾಮು ಹೊಂದಿರುವ ಪ್ರಭುತ್ವ ತನ್ನ ಮಾತಿನಂತೆ ನಡೆದುಕೊಳ್ಳದ ಉದ್ಯಮಪತಿಗಳನ್ನು ಕೂಡ ಟಾರ್ಗೆಟ್ ಮಾಡಿ, ಯಾರು ತನ್ನ ಪರವಾಗಿಲ್ಲವೊ ಅವರೆಲ್ಲರೂ ತನ್ನ ವಿರುದ್ಧ ಇದ್ದಾರೆ ಎಂದುಕೊಂಡು ವಿರೋಧಗಳನ್ನು ಹದ್ದಬಸ್ತಿನಲ್ಲಿಡಲು ಮತ್ತು ಕಂಪನಿಗಳ ನೀಡುವ ದೇಣಿಗೆಗಳು ತನಗೆ ಬರದೆ ತನ್ನ ವಿರೋಧಿಗಳಿಗೆ ಹೋಗುತ್ತಿದೆ ಎಂದು ದಿಗಿಲುಗೊಂಡು ಕಂಪನಿಗಳನ್ನು ಕೂಡ ಎರಡು ವಿಭಾಗವಾಗಿ ವಿಂಗಡಿಸಿ ನೋಡುವಂತಹ ಕೆಳಮಟ್ಟಕ್ಕೆ ಇಳಿದಿದೆ ಎನ್ನಲಾಗುತ್ತಿದೆ.
ಮೂಲದಲ್ಲಿ, ಐಟಿ ಕ್ಷೇತ್ರವನ್ನು ತನ್ನ ಪರವಾಗಿರುವ ಉದ್ಯಮ ಪತಿಗಳ ಕೈಗೆ ಹೋಗುವಂತೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಮತ್ತು ಉದ್ಯಮಗಳು ಕೂಡ ತನ್ನ ಅಜೆಂಡಾದಂತೆ ನಡೆದುಕೊಳ್ಳುವಂತೆ ಎಚ್ಚರಿಸುವ ಪಿತೂರಿ ಇದಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇನ್ಫೋಸಿಸ್ ಬಗ್ಗೆ ಪಾಂಚಜನ್ಯದಲ್ಲಿ ಪ್ರಕಟವಾದ ವರದಿಯ ವಿರುದ್ಧ ಹಲವಾರು ಮಂದಿ ಟೀಕೆ ಮಾಡಿದ್ದಾರೆ. ಐಟಿ ದಿಗ್ಗಜ ಇನ್ಫೋಸಿಸ್ ವಿರುದ್ದ ಈ ರೀತಿಯ ಆಧಾರ ರಹಿತವಾದ ಆರೋಪವನ್ನು ಮಾಡುವುದು ಸರಿಯಲ್ಲ ಎಂದು ಹಲವಾರು ಮಂದಿ ಹೇಳಿದ್ದಾರೆ. ಪಾಂಚಜನ್ಯದಲ್ಲಿ ಪ್ರಕಟವಾಗಿರುವ ವರದಿಗೆ ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.



