
ಓವಲ್: ಒಲ್ಲೇ ಪೊಪ್ (81) ಹಾಗೂ ಕ್ರಿಸ್ ವೋಕ್ಸ್ (50) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 290 ರನ್ ಗಳಿಸಿ ಪ್ರಥಮ ಇನ್ನಿಂಗ್ಸ್‌ನಲ್ಲಿ 99 ರನ್ ಗಳ ಮುನ್ನಡೆ ಕಾಯ್ದುಕೊಂಡಿತು.
ಭಾರತ ಪ್ರಥಮ ಇನ್ನಿಂಗ್ಸ್‌ನಲ್ಲಿ 191 ರನ್ ಗಳಿಸಿತ್ತು.

53 ರನ್ ಗೆ 3 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಮೊದಲ ದಿನದ ಮೊತ್ತಕ್ಕೆ 1 ರನ್ ಗಳಿಸುತ್ತಲೇ ನೈಟ್ ವಾಚ್ಮನ್ ಆಗಿದ್ದ ಕ್ರೆಗ್ ಓವರ್ಟನ್ ಅವರ ವಿಕೆಟ್ ಕಳೆದುಕೊಂಡಿತು. ಡೇವಿಡ್ ಮಾಲನ್ (31) ಕೂಡ ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲಿಲ್ಲ. ಜಾನಿ ಬೈರ್ಸ್ಟಾ ಮತ್ತು ಒಲ್ಲೇ ಪೊಪ್ ಆರನೇ ವಿಕೆಟ್ ಜತೆಯಾಟದಲ್ಲಿ 89 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಚೇತರಿಕೆಯ ಹೆಜ್ಜೆ ಹಾಕಿತು. 159 ಎಸೆತಗಳನ್ನೆದುರಿಸಿದ ಪೊಪ್ 6 ಬೌಂಡರಿ ನೆರವಿನಿಂದ 81 ರನ್ ಗಳಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಮೊಯಿನ್ ಅಲಿ (35) ರನ್ ಗಳಿಸಿ ಇಂಗ್ಲೆಂಡ್ ನ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡದ ಮುನ್ನಡೆಯನ್ನು ನೂರರ ಸಮೀಪ ಕೊಂಡೊಯ್ದಿದ್ದು ಕ್ರಿಸ್ ವೋಕ್ಸ್ ಅವರ ಮಿಂಚಿನ ಅರ್ಧ ಶತಕ. 60 ಎಸೆತಗಳನ್ನೆದುರಿಸಿದ ವೋಕ್ಸ್ 11 ಬೌಂಡರಿ ನೆರವಿನಿಂದ ಅಮೂಲ್ಯ 50 ರನ್ ಗಳಿಸಿ ರನೌಟ್ ಗೆ ಬಲಿಯಾದರು.
ಭಾರತದ ಪರ ಉಮೇಶ್ ಯಾದವ್ 3, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ 2 ಮತ್ತು ಶಾರ್ದೂಲ್ ಠಾಕೂರ್ , ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಗಳಿಸಿದರು.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 19 ರನ್ ಗಳಿಸಿ ಎಚ್ಚರಿಕೆಯ ಆಟ ಆರಂಭಿಸಿದೆ.




