ತಾಯ್ತನದ ಖುಷಿ; ಸಂಸದೆ ನುಸ್ರತ್ ಜಹಾನ್ ಹೊಸ ಲುಕ್

ನವದೆಹಲಿ: ನಟಿ, ರಾಜಕಾರಣಿ ನುಸ್ರತ್ ಜಹಾನ್ ತಾಯಿಯಾಗಿದ್ದಾರೆ. ಗಂಡುಮಗುವಿನ ತಾಯಿಯಾದ ಒಂದು ವಾರದ ಬಳಿಕ ಇನ್ಸ್ಟಾಗ್ರಾಂನಲ್ಲಿ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿದ್ದು, ತಾವೀಗ ಹೊಸ ಬಗೆಯಲ್ಲಿ ಕಾಣಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಕಳೆದ ಆಗಸ್ಟ್ 26ರಂದು ನುಸ್ರತ್ ಜಹಾನ್ ಮತ್ತು ಪತಿ ನಿಖಿಲ್ ಜೈನ್ ಗಂಡುಮಗುವನ್ನು ತಮ್ಮ ಜೀವನದಲ್ಲಿ ಬರಮಾಡಿಕೊಂಡರು. ಆ ಖುಷಿಯಲ್ಲಿ ಹೊಸ ಪಾತ್ರ, ಹೊಸ ತಾಯಿಯ ಬದುಕು, ಹೊಸ ನೋಟ ಎಂಬ ಹ್ಯಾಷ್ಟ್ಯಾಗ್ಗಳೊಂದಿಗೆ ಹಂಚಿಕೊಂಡಿರುವ ಈ ಚಿತ್ರದೊಡನೆ ನುಸ್ರತ್ ಬರೆದುಕೊಂಡಿರುವುದು ಹೀಗೆ: “ಯಾರಿಂದ ನೀವು ಸಲಹೆಯನ್ನು ತೆಗೆದುಕೊಳ್ಳುವುದಿಲ್ಲವೊ ಅಂಥವರ ಟೀಕೆಯನ್ನೂ ಒಪ್ಪಬೇಡಿ.”

ಪತಿ ಪತ್ನಿ ಕೆಲವು ತಿಂಗಳುಗಳಿಂದ ದೂರವಾಗಿದ್ದಾರೆ. ಆದರೆ, ಮಗುವಿನ ವಿಚಾರದಲ್ಲಿ ತನ್ನ ಹಾರೈಕೆ ನುಸ್ರತ್ ಜೊತೆಗಿದೆ ಎಂದು ಪತಿ ನಿಖಿಲ್ ಜೈನ್ ಹೇಳಿಕೊಂಡಿದ್ದಾರೆ.
2019ರಲ್ಲಿ ಇಬ್ಬರೂ ಟರ್ಕಿಯಲ್ಲಿ ಎರಡು ಬಾರಿ ಮದುವೆಯಾಗಿದ್ದರು. ಭಾರತೀಯ ಕಾನೂನನಿನಡಿಯಲ್ಲಿ ತಮ್ಮ ಮದುವೆ ಮಾನ್ಯವಾಗಿಲ್ಲ ಎಂದು ನುಸ್ರತ್ ಈ ವರ್ಷದ ಆರಂಭದಲ್ಲಿ ಹೇಳಿಕೆ ನೀಡಿದ್ದರು.
ಗರ್ಭಿಣಿಯಾಗಿದ್ದ ಹೊತ್ತಲ್ಲಿ ಇನ್ಸ್ಟಾಗ್ರಾಂನಲ್ಲಿ ನುಸ್ರತ್ ಹಂಚಿಕೊಂಡಿದ್ದ ಮೇಕಪ್ ಇಲ್ಲದ ಸೆಲ್ಫೀ ಕೂಡ ಗಮನ ಸೆಳೆದಿತ್ತು. ಭಯವನ್ನು ಮೀರುವ ನಂಬಿಕೆ ಎಂದು ಆಗ ನುಸ್ರತ್ ಬರೆದುಕೊಂಡಿದ್ದರು.
ನುಸ್ರತ್ ಜಹಾನ್ ಪ್ರಸ್ತುತ ತೃಣಮೂಲ ಕಾಂಗ್ರೆಸ್ ಸಂಸದೆಯಾಗಿದ್ದಾರೆ.



