ಮುಂದಿನ ಹತ್ತು ವರ್ಷದೊಳಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಸಚಿವ ಅಶ್ವತ್ಥನಾರಾಯಣ

ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಬೇಕಾದ ಅನಿವಾರ್ಯತೆಯಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಕೊಣಾಜೆಯಲ್ಲಿರುವ ಮಂಗಳಗಂಗೋತ್ರಿ ಸಭಾಂಗಣದಲ್ಲಿ ಮಂಗಳೂರು ವಿವಿ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷಣದ ಕಲಿಕಾ ನೀತಿ, ಮೌಲ್ಯಮಾಪನ, ಪಠ್ಯಕ್ರಮದಲ್ಲಿ ಬದಲಾವಣೆ ತರಬೇಕಾಗಿದೆ. ಈವರೆಗೆ ಇದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿಲ್ಲ. ನೂತನ ಶಿಕ್ಷಣ ನೀತಿ ರೂಪಿಸಲು ಐದು ವರ್ಷಗಳಾಗಿವೆ. ರಾಜ್ಯದಲ್ಲಿ ಮುಂದಿನ 10 ವರ್ಷದೊಳಗೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದರು.
ನೂತನ ಶಿಕ್ಷಣ ನೀತಿ ವಿದ್ಯಾರ್ಥಿ ಸ್ನೇಹಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಭವಿಷ್ಯದ ಭಾರತದ ಎಲ್ಲ ಅಗತ್ಯಗಳನ್ನು ಪೂರೈಸುವ ಪರಿಣಾಮಕಾರಿ ಅಂಶಗಳೆಲ್ಲವೂ ಇದರಲ್ಲೇ ಅಡಕವಾಗಿವೆ ಎಂದು ಅವರು ನುಡಿದರು.
ಪಠ್ಯದಲ್ಲಿ ಪಠ್ಯೇತರ ವಿಷಯ:
ಮೊದಲು ಪಠ್ಯೇತರ ಚಟುವಟಿಕೆ ಇತ್ತು. ಆದರೆ ಈಗ ಅದು ಕೂಡ ಪಠ್ಯದ ಒಂದು ಭಾಗ. ಅಲ್ಲದೆ, ಈವರೆಗೆ ಸಮಾಜದ ಅನೇಕ ಸಮಸ್ಯೆಗಳು ಕಲಿಕೆಯ ಒಂದು ಭಾಗ ಆಗಿರಲಿಲ್ಲ. ಪುಸ್ತಕದಲ್ಲಿ ಇರುವುದನ್ನು ಮಾತ್ರ ಓದುವ ಕೆಲಸ ಆಗುತ್ತಿತ್ತು. ಅದರ ಬದಲಿಗೆ ಕುಶಲತೆ ಕಲಿಸುವ ಕೆಲಸವೂ ಈಗ ಆಗಲಿದೆ. ವಿದ್ಯಾರ್ಥಿ ತನಗೆ ಇಷ್ಟವಾಗುವ ವಿಷಯವನ್ನು ಮುಕ್ತವಾಗಿ ಕಲಿಯುವ ಅವಕಾಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಎಂದು ಸಚಿವರು ಪ್ರತಿಪಾದಿಸಿದರು.
ಈವರಗೂ ಇರುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಫ್ಲೆಕ್ಸಿಬಿಲಿಟಿ ಇರಲಿಲ್ಲ. ಈಗ ಬಹು ಆಯ್ಕೆಯ ಹಾಗೂ ಬಹು ಶಿಸ್ತೀಯ ಕಲಿಕೆಗೆ ಮುಕ್ತ ಅವಕಾಶ ಇದೆ. ತಂತ್ರಜ್ಞಾನ ಮೂಲಕ ಎಲ್ಲಿಂದ ಬೇಕಾದರೂ ಕಲಿಯಬಹುದು. ಮಾಹಿತಿಯನ್ನು ಜ್ಞಾನ ವಾಗಿ ರೂಪಿಸುವ ಕೆಲಸ ಆಗಬೇಕು, ಅದು ಈಗ ಆಗುತ್ತಿದೆ ಎಂದು ಅವರು ಹೇಳಿದರು.
