ಅಧಿಕಾರ ತ್ಯಾಗ ಮಾಡುವ ಮುಂಚೆ ಬಿಎಸ್ವೈ ಕಣ್ಣೀರು ಹಾಕಿದ್ದಾರೆ: ಡಿಕೆ ಶಿವಕುಮಾರ್

ಧಾರವಾಡ : ಈ ಹಿಂದೆ ರಾಜ್ಯದಲ್ಲಿ ಸಿಎಂ ಆಗಿದ್ದ ಬಿ ಎಸ್ ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರನ್ನು ಬಿಜೆಪಿ ಹೈಕಮಾಂಡ್ ಏಕಾಏಕಿ ಬದಲಾವಣೆ ಮಾಡಿತ್ತು. ಆದರೆ ಅಧಿಕಾರ ತ್ಯಾಗ ಮಾಡುವ ಮುಂಚೆ ಅಂದಿನ ಹಾಲಿ ಸಿಎಂ ಬಿಎಸ್ವೈ ಅವರು ಕಣ್ಣೀರು ಹಾಕಿದ್ದರು. ಅದರ ಬಗ್ಗೆ ಬಿಜೆಪಿ ನಾಯಕರು ಇನ್ನೂ ಸ್ಪಷ್ಟನೆ ನೀಡಿಲ್ಲ. ಬಿಎಸ್ವೈ ಕಣ್ಣೀರಿನ ಕುರಿತು ಬಿಜೆಪಿ ನಾಯಕರ ಸ್ಪಷ್ಟನೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರದಲ್ಲಿ ಕೊರೊನಾ ಭ್ರಷ್ಟಾಚಾರ ದೊಡ್ಡ ಮಟ್ಟಿಗೆ ಆಗಿದೆ. ಅದಕ್ಕೆ ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯೇ ಸಾಕ್ಷಿ ಆಗಿದೆ. ಕೊರೊನಾ ಭ್ರಷ್ಟಾಚಾರದಲ್ಲಿ ರಾಜ್ಯ ರಾಷ್ಟ್ರಕ್ಕೆ ನಂಬರ್ ಓನ್ ಸ್ಥಾನದಲ್ಲಿದೆ. ಹಾಗಾಗಿ ಬಿಜೆಪಿ ಹೈಕಮಾಂಡ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿ ಕೈ ತೊಳೆದುಕೊಂಡಿದೆ ಎಂದು ರಾಜ್ಯ ಹಾಗೂ ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರಕ್ಕೆ ಬಂದ್ರೆ ಕೊಟ್ಟ ಭರವಸೆ ಈಡೇರಿಸುತ್ತೇವೆ:
ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅಲ್ಲದೆ ಕಳೆದ 15 ವರ್ಷಗಳಿಂದ ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ನಡೆಸಿದೆ. ಆದರೆ ಅವಳಿನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಶೂನ್ಯವಾಗಿವೆ. ಜನರಿಗೆ ಬಿಜೆಪಿ ಸುಳ್ಳಿನ ಸರಮಾಲೆ ಕೊಟ್ಟಿದೆ. ಇಲ್ಲಿರುವಂತಹ ಬಿಜೆಪಿ ಸ್ನೇಹಿತರು ಹಾಗೂ ಕೇಂದ್ರ ಸಚಿವರು ಇದಕ್ಕೆ ಉತ್ತರ ಕೊಡಬೇಕು.
ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಏಕೆ ಮಾಡ್ತಾ ಇದೀರಾ..? ನಿಮಗೆ ಜನರು ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ-ಧಾರವಾಡ ನಗರ ಗುಂಡಿಗಳ ನಗರವಾಗಿದೆ. ಇಲ್ಲಿ ಡ್ಯಾನ್ಸ್ ಕಲಿಯಬೇಕಾಗಿಲ್ಲ, ಹುಬ್ಬಳ್ಳಿ-ಧಾರವಾಡದ ರಸ್ತೆಗಳು ಡ್ಯಾನ್ಸ್ ಹೇಳಿಕೊಡ್ತವೆ. ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಮುಖ್ಯಮಂತ್ರಿ ಸಾಹೇಬರು ಇತ್ತ ಕಡೆ ನೋಡಬೇಕು. ಇಲ್ಲಿ ನೀವು ಬಂದು ಕೆಲಸ ಮಾಡೋದು ಬೇಡ, ನಿಮ್ಮ ಅಧಿಕಾರಿಗಳನ್ನ ಕಳುಹಿಸಿ ಕೆಲಸ ಮಾಡಿ. ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಯಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದೆ. ನಾನು ಅಪೀಲ ಮಾಡ್ತಾ ಇದೇನಿ ನಮ್ಮ ಮತದಾರರಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಎಲ್ಲವನ್ನು ಈಡೇರಿಸುತ್ತೆವೆ. ಇದರ ಬಗ್ಗೆ ನಾನು ಪ್ರಮಾಣ ಮಾಡ್ತೆನಿ, ನಮ್ಮ ಪಕ್ಷದ ಸಿದ್ದಾಂತದ ಮೇಲೆ ನಿಮಗೆ ಮಾತು ಕೋಡ್ತೆನೆ.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ, ಪಾಲಿಕೆಗೆ ತುಂಬುತ್ತಿರುವ ಶೇ. 50 ರಷ್ಟು ತೆರಿಗೆ ಕಡಿಮೆ ಮಾಡುತ್ತೇವೆ ಎಂದರು.
60 ಕ್ಕೂ ಹೆಚ್ಚ ಸ್ಥಾನ ಗೆಲ್ಲುತ್ತೆವೆ:
ಹುಬ್ಬಳ್ಳಿ ಧಾರವಾಡ ಅವಳಿನಗದಲ್ಲಿ ಹೊರಗಡೆ ಬಂದ್ರೆ ದೂಳಿನಿಂದ ಬಟ್ಟೆ ಕಲರ್ ಚೆಂಜ್ ಆಗುತ್ತೆ ಹುಬ್ಬಳ್ಳಿಯಿಂದ ಹೋಗುವಾಗ ನಾನು ಬಟ್ಟೆ ಬಿಚ್ಚಿಟ್ಟು ಹೋಗುವ ಸ್ಥಿತಿ ಇದೆ. ನಾವು ನುಡಿದಂತೆ ನಡೆದಿದ್ದೇವೆ ನಾವು ಪ್ರಾಮಾಣಿಕವಾಗಿ ಜನತೆಯ ಸೇವೆ ಮಾಡಲಿದ್ದೇವೆ. ಹು-ಧಾ ಪಾಲಿಕೆಯಲ್ಲಿ 60 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಆರ್ಟಿಎಸ್ನಲ್ಲಿ ಭ್ರಷ್ಟಾಚಾರ ನಡೆದಿದೆ:
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಿಆರ್ ಟಿಎಸ್ನ ರಸ್ತೆ ನಿರ್ಮಾಣದಲ್ಲಿ ಭ್ರಷ್ಟಾಚಾರವಾಗಿದೆ. ಈ ವಿಚಾರದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರನ್ನೇ ನಾವು ನಂಬಬೇಕಿದೆ. ಬೆಲ್ಲದ್ ಅವರಿಗೆ ಒಳಗಿನ ಗುಟ್ಟು ಗೊತ್ತಿದೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಬೆಲ್ಲದ್ ಅವರಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು.
