ಮೋದಿ ವಿರುದ್ಧದ ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರದಲ್ಲಿ ಆರಂಭದಲ್ಲೇ ಬಿರುಕು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಏಕಾಂಗಿ ಹೋರಾಟ ಸಾಧ್ಯವಿಲ್ಲ ಎಂದು ಕೊನೆಗೂ ಕಾಂಗ್ರೆಸ್ ಗೆ ಮನವರಿಕೆ ಆಗಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದೆ. ಇದರ ಅಂಗವಾಗಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ನೇತೃತ್ವದಲ್ಲಿ 19 ರಾಜಕೀಯ ಪಕ್ಷಗಳು ವರ್ಚುವಲ್ ಮೀಟಿಂಗ್ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿವೆ. ಆದರೆ, ಇನ್ನೇನು ವಾರ ಕಳೆದಿಲ್ಲ, ಆಗಲೇ ನಾಯಕತ್ವದ ಕುರಿತು ಅಪಸ್ವರ ಆರಂಭವಾಗಿದೆ. ವರ್ಚುವಲ್ ಸಭೆಯಲ್ಲಿ ಸೋನಿಯಾ ಗಾಂಧಿ, ಎಲ್ಲಾ ಪಕ್ಷಗಳಿಗೂ ಅದರದ್ದೇ ಆದ ಬದ್ಧತೆಗಳನ್ನು ಒಪ್ಪಿಕೊಳ್ಳುತ್ತೇನೆ. ಆದರೆ ದೇಶದ ಹಿತಾಸಕ್ತಿ, ಸಂವಿಧಾನ ರಕ್ಷಣೆಯ ನಿಟ್ಟಿನಲ್ಲಿ ನಾವು ಒಂದಿಷ್ಟು ರಾಜಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದಿದ್ದರು.
ಈಗ ಮುಖ್ಯವಾಗಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಮೊದಲು ಗೆಲುವಿನತ್ತ ಸಾಗಲು ತಳಮಟ್ಟದ ಪ್ರಯತ್ನಗಳು ಆಗಬೇಕು. ಆಮೇಲೆ ಪರಿಸ್ಥಿತಿ ನೋಡಿಕೊಂಡು ನಾಯಕತ್ವವನ್ನು ನಿರ್ಣಯಿಸೋಣ ಎಂದು ಪರೋಕ್ಷವಾಗಿ ಕಾಂಗ್ರೆಸ್ ಯತ್ನಕ್ಕೆ ಅಡ್ಡಗಾಲು ಹಾಕಿದ್ದಾರೆ. ಇನ್ನೊಂದು ಕಡೆ ಬಿಹಾರದ ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ಕೂಡ ಇದೇ ಮಾತಿಗೆ ಧ್ವನಿಗೂಡಿಸಿದ್ದಾರೆ. ಈಗಲೇ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ಆರಂಭಿಸಬೇಕು. ಮುಂದಿನ ದಿನಗಳಲ್ಲಿ ನಾಯಕತ್ವದ ಬಗ್ಗೆ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಜನರು ಮುಂದಿನ ನಾಯಕರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲವಾದರೆ ಮೋದಿ ನೇತೃತ್ವದ ಬಿಜೆಪಿಯನ್ನು ಬಗ್ಗು ಬಡಿಯಲು ಕಷ್ಟಸಾಧ್ಯ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಆರಂಭದಲ್ಲೇ ಕಾಂಗ್ರೆಸ್ ನೇತೃತ್ವದ ಒಗ್ಗಟ್ಟಿನ ಮಂತ್ರ ಬಾಲಗ್ರಹ ಪೀಡೆಯಿಂದ ನರಳುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೀಗಾಗಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಒಗ್ಗಟ್ಟನ್ನು ಮುರಿಯಲು ಬಿಜೆಪಿ ಇನ್ನಿಲ್ಲದ ಶ್ರಮವಹಿಸುವುದರಲ್ಲಿ ಸಂದೇಹವಿಲ್ಲ. ಇ.ಡಿ, ಸಿಬಿಐ ಸೇರಿದಂತೆ ಯಾವುದೇ ದಾಳಿಗಳ ತಂತ್ರಗಳ ಮೂಲಕ ಇಂತಹ ಒಗ್ಗಟ್ಟು ಮುರಿಯುವುದರಲ್ಲಿ ಬಿಜೆಪಿ ಸರಕಾರ ನಿಸ್ಸೀಮ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ಪ್ರತಿಪಕ್ಷಗಳು ಈಗಲೇ ಕಚ್ಚಾಡಿಕೊಂಡರೆ ರೋಗಿ ಬಯಸ್ಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದನ್ನೇ ಅನ್ನೋ ಮಾತು ಮತ್ತೊಮ್ಮೆ ನಿಜವಾಗಬಹುದು.




