Breaking NewsLatestವಿದೇಶಸುದ್ದಿ
ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾಂಬ್ ದಾಳಿ: 60 ಅಫ್ಘನ್ನರು, 12 ಅಮೇರಿಕ ಸೇನಾ ಸಿಬ್ಬಂದಿಗಳ ಸಾವು

ಕಾಬೂಲ್: ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಹಮೀದ್ ಕರ್ಝಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಅವಳಿ ಬಾಂಬ್ ದಾಳಿ ಪ್ರಕರಣದಲ್ಲಿ 60 ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ಹಾಗೂ 12 ಮಂದಿ ಅಮೆರಿಕ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದು 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕ ತನ್ನ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಕೊನೆಯ ಹಂತದಲ್ಲಿ ಈ ಸ್ಫೋಟ ಸಂಭವಿಸಿದ್ದು, ಕಾಬೂಲ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಭದ್ರತಾ ಅಲರ್ಟ್ ನ್ನು ಘೋಷಿಸಿದೆ. 11 ನೌಕಾಪಡೆ ಸಿಬ್ಬಂದಿ ಹಾಗೂ ಓರ್ವ ನೌಕಾಪಡೆ ವೈದ್ಯರು ಸಾವನ್ನಪ್ಪಿದ್ದು, 12 ಮಂದಿ ಸೇವಾ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ರಕ್ತದ ಮಡುವಿನಲ್ಲಿ ಬಿದ್ದ ಹೆಣಗಳು, ಗಾಯಾಳುಗಳ ದೃಶ್ಯಗಳು ಘನಘೋರವಾಗಿ ಕಂಡುಬಂದಿವೆ. ದಾಳಿಯ ಹೊಣೆಯನ್ನು ಐಸಿಸ್-ಕೆ ಸಂಘಟನೆ ಹೊತ್ತಿದೆ. ಸುಮಾರು 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
