ರಾಮನಗರ

ರಸಗೊಬ್ಬರ ಅಭಾವ; ರಾಮನಗರ ಹಾಪ್​ಕಾಮ್ಸ್ ಎದುರು ರೈತರ ಕ್ಯೂ

ರಾಮನಗರ: ಕಳೆದ ಎರಡು ದಿನಗಳಿಂದ ಚನ್ನಪಟ್ಟಣ ತಾಲೂಕಿನಲ್ಲಿ ತುಂತರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆ ಚುರುಕಾಗಿದ್ದು, ರಾಗಿ ಮತ್ತು ಇನ್ನಿತರ ಬೆಳೆ ಬಿತ್ತನೆ ಮಾಡಲು ರೈತರಿಗೆ ಯೂರಿಯಾ ರಸಗೊಬ್ಬರದ ಅವಶ್ಯಕತೆ ಇದೆ. ಆದರೆ ರಸಗೊಬ್ಬರದ ಅಭಾವ ಉಂಟಾಗಿದ್ದು, ಪಟ್ಟಣದ ಹಾಪ್‌ಕಾಮ್ಸ್ ಎದುರು ಸಾವಿರಕ್ಕೂ ಹೆಚ್ಚು ರೈತರು ರಸಗೊಬ್ಬರಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಇಲ್ಲಿನ ಹಾಪ್‌ಕಾಮ್ಸ್ಗೆ ಬಂದಿದ್ದು ಮಾತ್ರ 400 ಚೀಲ ರಸಗೊಬ್ಬರ.

ನೂರಾರು ಮಂದಿ ರೈತರು ಗೊಬ್ಬರ ಕೊಳ್ಳಲು ನಾಮುಂದು ತಾಮುಂದು ಎಂದು ನೂಗುನುಗ್ಗಲಾಗಿ ಗೊಬ್ಬರಕ್ಕಾಗಿ ಪರದಾಡುವಂತಾಯಿತು.
ಮಳೆಯಾದ ಕಾರಣ ರೈತರು ರಸಗೊಬ್ಬರಕ್ಕಾಗಿ ಹಾಪ್‌ಕಾಮ್ಸ್ಗೆ ಲಗ್ಗೆ ಇಟ್ಟರು. ಆದರೆ ಮಳೆಯ ಮುನ್ಸೂಚನೆ ಇಲ್ಲದ ಹಾಪ್‌ಕಾಮ್ಸ್ನಿಂದ ಕೇವಲ 400 ಚೀಲ ರಸಗೊಬ್ಬರ ಸಂಗ್ರಹ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಮುಂಜಾನೆಯಿಂದ ಏಕಕಾಲಕ್ಕೆ ಸಾವಿರಾರು ರೈತರು ಸಾಲುಗಟ್ಟಿ ನಿಂತರು. ಈ ವೇಳೆ ಸಾವಿರಕ್ಕೂ ಹೆಚ್ಚು ರೈತರು ರಸಗೊಬ್ಬರಕ್ಕೆ ನೂಕುನುಗ್ಗಲಾಗಿ ಈ ವೇಳೆ ನೂರಾರು ಬೈಕ್‌ಗಳು ಪಾರ್ಕಿಂಗ್ ಆಗಿದ್ದವು.

ಆಕ್ರೋಶ: ಕೃಷಿ ಚಟುವಟಿಕೆ ಆರಂಭವಾಗಿದ್ದು, ತಾಲೂಕಿನಲ್ಲಿ ಕೃಷಿ ಇಲಾಖೆ ರಸಗೊಬ್ಬರ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಪಿಎಸಿಎಸ್‌ಗಳಲ್ಲಿ ರಸಗೊಬ್ಬರ ಪೂರೈಕೆ ಮಾಡಿದ್ದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಯೂರಿಯಾಕ್ಕಾಗಿ ರೈತರು ಪಟ್ಟಣಕ್ಕೆ ಬರುವ ಅಗತ್ಯ ಇರಲಿಲ್ಲ. ಆದರೆ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ ಎಂದು ರಸಗೊಬ್ಬರ ಸಿಗದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಚಟುವಟಿಕೆ ಆರಂಭವಾಗುವ ಮುನ್ನ ಎಲ್ಲ ಕಡೆ ಗೊಬ್ಬರ ಪೂರೈಕೆ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ ಈ ಬಗ್ಗೆ ಕೃಷಿ ಅಧಿಕಾರಿಗಳು ಮುಂಜಾಗ್ರತೆ ವಹಿಸುವುದಿಲ್ಲ. ಇದನ್ನು ಸದುಪಯೋಗ ಮಾಡಿಕೊಳ್ಳುವ ಖಾಸಗಿ ಅಂಗಡಿಯ ಮಾಲೀಕರು ಕೃತಕ ಅಭಾವ ಸೃಷ್ಟಿಸಿ, ರಸಗೊಬ್ಬರವನ್ನು ಸ್ಟಾಕ್ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೂ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂದು ರೈತರು ಆರೋಪ ಮಾಡಿದರು.

ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಖರೀದಿ ಮಾಡಲು ಮುಂದಾದರೆ ಅವರು ಕಾಂಪ್ಲೆಕ್ಸ್ ಖರೀದಿ ಮಾಡಲು ಒತ್ತಡ ಹಾಕುತ್ತಾರೆ. ಹೆಚ್ಚು ಲಾಭದಾಯಕವಾಗಿರುವ ಕಾಂಪ್ಲೆಕ್ಸ್ ಕೊಂಡರೆ ಮಾತ್ರ ಎರಡು ಚೀಲ ರಸಗೊಬ್ಬರ ನೀಡುತ್ತಾರೆ. ಆದರೆ ರೈತರು ಕಾಂಪ್ಲೆಕ್ಸ್ ಖರೀದಿ ಮಾಡದ ಕಾರಣ ಅವರಿಗೆ ಒಂದು ಚೀಲ ಮಾತ್ರ ಯೂರಿಯಾ ನೀಡುತ್ತಾರೆ. ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಕಿಡಿಕಾರಿದರು.

ಪಟ್ಟಣದ ಸಾತನೂರು ಸರ್ಕಲ್ ಬಳಿಯ ಹಾಪ್‌ಕಾಮ್ಸ್ ಬಳಿ ಕಾದು ಕುಳಿತಿದ್ದ ರೈತರಲ್ಲಿ ನೂರಾರು ರೈತರಿಗೆ ರಸಗೊಬ್ಬರ ಸಿಗದೆ ಗಂಟೆಗಟ್ಟಲೆ ಕಾದು ಬರಿಗೈಯಲ್ಲಿ ತೆರಳಿದರು.

ಈ ಕೂಡಲೆ ಅಧಿಕಾರಿಗಳು ಗೊಬ್ಬರ ಪೂರೈಕೆಗೆ ಕ್ರಮ ಕೈಗೊಂಡು ತಾಲೂಕಿನ ಪಿಎಸಿಎಸ್‌ಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅಲ್ಲದೇ ಇದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯೂರಿಯಾ ಅಭಾವ ಉಂಟಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button